ಕಪಿ ಬಾಧೆಯಿಂದ ಕೃಷಿಕ ಕಂಗಾಲು

Monkey
Published on

ನರೇಂದ್ರ ಎಸ್. ಮರಸಣಿಗೆ
ಹೆಬ್ರಿ ತಾಲೂಕಿನ ವಿವಿಧೆಡೆ ಮಂಗಗಳ ಕಾಟದಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ. ಹಿಂಡುಹಿಂಡಾಗಿ ಬಂದು ಸೀಯಾಳ ಹಾಗೂ ಇತರ ಫಸಲು ತಿನ್ನುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ಅಕಾಲಿಕ ಮಳೆ, ಕೃಷಿ ಸಂಬಂಧಿತ ರೋಗಗಳು, ಇತರ ಕಾಡು ಪ್ರಾಣಿಗಳ ಹಾವಳಿ, ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಮಂಗಗಳ ಹಾವಳಿ ದೊಡ್ಡ ಹೊಡೆತವಾಗಿದೆ.
ಸೋಮೇಶ್ವರದ ಪೇಟೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹೆಂಚು ಕಿತ್ತು ಮನೆಯೊಳಗೂ ನುಗ್ಗುವ ಮಂಗಗಳು ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯುತ್ತವೆ. ಪೇಟೆಯಲ್ಲಿ ಪ್ರವಾಸಿಗರು, ಸ್ಥಳೀಯರಿಗೂ ಸಮಸ್ಯೆ ಉಂಟು ಮಾಡುತ್ತಿದೆ. ಗ್ರಾಮಸಭೆಯಲ್ಲಿ, ಜನಸಂಪರ್ಕ ಸಭೆ, ತಹಸೀಲ್ದಾರ್ ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ವೇಳೆ ಮನವಿ ನೀಡಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.
ಸೋಮೇಶ್ವರ ಅಭಯಾರಣ್ಯವಾದ ಕಾರಣ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಪೇಟೆಯಲ್ಲಿ ಹಿಡಿದ ಮಂಗಗಳನ್ನು ಈ ಭಾಗಕ್ಕೆ ಸ್ಥಳಾಂತರಿಸುವುದರಿಂದ ಮಂಗಗಳು ಮತ್ತೆ ಕಾಡಿನಿಂದ ನಾಡಿಗೆ ಬರುವುದು ಸಮಸ್ಯೆಯಾಗಿದೆ.
ಇತ್ತೀಚಿಗೆ ಅಡಕೆ ಮೇಲೂ ಮಂಗಗಳ ಹಾವಳಿ ಹೆಚ್ಚಾಗಿದ್ದು ಅಡಕೆ ಚೊಗರನ್ನು ಹೀರುತ್ತಿವೆ. ಈ ಎಲ್ಲ ಸಮಸ್ಯೆಗಳಿಂದ ಕೃಷಿಯೇ ಬೇಡ ಎನ್ನುವಷ್ಟರ ಮಟ್ಟಿಗೆ ರೋಸಿ ಹೋಗಿರುವ ರೈತರಿಗೆ ಶಾಶ್ವತವಾಗಿ ಸಮಸ್ಯೆಯನ್ನು ಹೋಗಲಾಡಿಸಲು ಮಂಕಿ ಪಾರ್ಕ್ ನಿರ್ಮಾಣ ಒಂದೇ ದಾರಿ ಎನ್ನುತ್ತಾರೆ ಜನರು.
ನಿರ್ಣಯ ಮಂಡನೆ: ಅರಣ್ಯ ಇಲಾಖೆಯಲ್ಲಿ ಮಂಗಗಳಿಂದ ಹಾನಿಯಾದ ಬೆಳೆಗೆ ಪರಿಹಾರ ಇರದ ಕಾರಣ, ಮಂಗಗಳಿಂದಲೂ ಹಾನಿಯಾದ ಕೃಷಿ ಬೆಳೆಗೆ ಪರಿಹಾರ ನೀಡಲು ಅಧ್ಯಕ್ಷ ದಿನೇಶ್ ಹೆಗ್ಡೆ ಅವರ ವಿಶೇಷ ಮುತುವರ್ಜಿಯಲ್ಲಿ ಗ್ರಾಮ ಸಭೆಯ ಮೂಲಕ ನಿರ್ಣಯ ಮಂಡನೆ ಆಗಿದೆ. ಈ ಮೂಲಕ ಸರ್ಕಾರದ ಗಮನವನ್ನು ಪಂಚಾಯಿತಿ ತರಲಿದೆ.

ಬೆಳೆ ಹಾನಿ ಪರಿಹಾರ ನೀಡಲಿ: ಅರಣ್ಯ ಇಲಾಖೆಯು ಕಾಡೆಮ್ಮೆ, ಹಂದಿ, ಕುರಿ, ಜಿಂಕೆ ಹಾಗೂ ನವಿಲುಗಳ ಹಾವಳಿಯಿಂದ ಬೆಳೆ ನಾಶವಾದಲ್ಲಿ ಪರಿಹಾರ ನೀಡುತ್ತದೆ. ಆದರೆ ಮಂಗಗಳಿಂದ ನಾಶವಾದ ಬೆಳೆಗಳಿಗೆ ಪರಿಹಾರ ನೀಡುವ ಕುರಿತು ಅರಣ್ಯ ಇಲಾಖೆಯ ಪ್ರಸ್ತಾವನೆ ಇಲ್ಲ. ಮಂಗಗಳು ನಾಶಪಡಿಸಿದ ಬೆಳೆಗಳಿಗೂ ಪರಿಹಾರ ನೀಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.

ಯೋಜನೆ ನನೆಗುದಿಗೆ: ಕಳೆದ ಕೆಲ ವರ್ಷಗಳಿಂದ ಮಂಗಗಳ ಹಾವಳಿಯನ್ನು ತಪ್ಪಿಸಲು ಮಂಕಿ ಪಾರ್ಕ್ ನಿರ್ಮಾಣದ ಕುರಿತು ಸರ್ಕಾರ ಯೋಜನೆಗಳು ಇನ್ನೂ ಕಾರ್ಯ ರೂಪಗೊಂಡಿಲ್ಲ. ಅಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಕರಾವಳಿಯಲ್ಲಿ ಮಂಗಗಳ ಹಾವಳಿಯನ್ನು ತಡೆಯಲು ಮಂಕಿ ಪಾರ್ಕ್ ನಿರ್ಮಿಸಿಯೇ ಬದ್ಧ ಎಂದು ಹೇಳಿದ್ದರೂ, ಅನುಷ್ಠಾನ ಆಗಲಿಲ್ಲ.

ಮಂಗಗಳು ವಿಪರೀತವಾಗಿ ಬೆಳೆ ಹಾನಿ ಮಾಡುತ್ತಿರುವುದರ ಬಗ್ಗೆ ಮಾಹಿತಿ ಇದೆ. ಮಂಗಗಳು ನಾಶಪಡಿಸಿದ ಬೆಳೆಗಳಿಗೆ ಪರಿಹಾರ ನೀಡಲು ಇಲಾಖೆಯಲ್ಲಿ ಅವಕಾಶವಿಲ್ಲ. ಈಗಾಗಲೇ ವಿವಿಧ ಇಲಾಖಾ ಮಟ್ಟದ ಸಭೆಯಲ್ಲಿ ಚರ್ಚೆಯಾಗಿದೆ. ಸಚಿವರು ಕೂಡ ಸರ್ಕಾರದ ಗಮನಕ್ಕೆ ತಂದಿದ್ದಾರೆ, ಎಲ್ಲ ಕಾರ್ಯಗಳು ಪ್ರಗತಿಯಲ್ಲಿದೆ.|ರುಥ್ರೇನ್, ಡಿಸಿಎಫ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿಭಾಗಮಂಗಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ನಾವು ಶಿಮ್ಲಾದಲ್ಲಿ ಅಧ್ಯಯನಕ್ಕೆ ಹೋದಾಗ ಮಂಕಿ ಪಾರ್ಕುಗಳ ನಿರ್ಮಾಣ ಮಾಡುವುದರಿಂದ ಮಂಗಗಳಿಂದ ಕೃಷಿಗೆ ಉಂಟಾಗುವ ಸಮಸ್ಯೆಯನ್ನು ತಪ್ಪಿಸಲು ಸಾಧ್ಯ ಎಂದು ಗಮನಿಸಿದ್ದೇವೆ. ಆದ್ದರಿಂದ ಸರ್ಕಾರವು ಮಂಕಿ ಪಾರ್ಕ್ ನಿರ್ಮಾಣ ಮಾಡಿ ರೈತರ ಸಮಸ್ಯೆಯನ್ನು ನೀಗಿಸಲಿ.| ಬಿ. ವಿ ಪೂಜಾರಿ ಪೆರ್ಡೂರುರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರ ಭಾರತೀಯ ಕಿಸಾನ್ ಸಂಘ ನಮ್ಮಲ್ಲಿ 60 ತೆಂಗಿನ ಮರಗಳಿವೆ, ಮಂಗಗಳು ಬಿಟ್ಟ ಸೀಯಾಳ ಅಥವಾ ತೆಂಗಿನ ಕಾಯಿಗಳನ್ನು ಪಡೆಯುತ್ತಿದ್ದೇವೆ. ನಾಡ್ಪಾಲು ಗ್ರಾಪಂ ವ್ಯಾಪ್ತಿಯಲ್ಲಿ ಶೇ.99ರಷ್ಟು ರೈತರಿಗೆ ಮಂಗಗಳ ಹಾವಳಿಯಿಂದ ಸಮಸ್ಯೆ ಆಗಿದೆ. ಮಂಕಿ ಪಾರ್ಕ್ ನಿರ್ಮಾಣವೇ ಶಾಶ್ವತ ಪರಿಹಾರ.| ದಿನೇಶ್ ಹೆಗ್ಡೆ, ಅಧ್ಯಕ್ಷ, ನಾಡ್ಪಾಲು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net