

ಬೆಂಗಳೂರು: ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಹಲವಾರು ನಿರ್ದೇಶಕರು ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಉತ್ಸವ ಗೋನ್ವಾರ್ (ಫೋಟೋ), ಜಯಶಂಕರ್ ಆರ್ಯರ್ (ಶಿವಮ್ಮ) ಹಾಗೂ ಆಯುಷ್ ಮಲ್ಲಿ (ಪಪ್ಪಿ) ಈಗಾಗಲೇ ಸದ್ದು ಮಾಡಿದ್ದಾರೆ. ಈ ಸಾಲಿಗೆ ಮತ್ತೊಬ್ಬ ಜವಾರಿ ನಿರ್ದೇಶಕ ಸೇರ್ಪಡೆಯಾಗುತ್ತಿದ್ದಾರೆ. ಅವರೇ ಭೀಮರಾವ್. ಮೂಲತಃ ಮಾನ್ವಿ ತಾಲೂಕಿನ ಭೀಮರಾವ್ ‘ಹೆಬ್ಬುಲಿ ಕಟ್’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಹೇರ್‌ಸ್ಟೈಲ್ ಎಲ್ಲೆಡೆ ಟ್ರೆಂಡ್ ಆಗಿತ್ತು. ಇದರ ಎಳೆಯನ್ನು ಇಟ್ಟುಕೊಂಡು ಯುವಜನಾಂಗದ ಆಕರ್ಷಣೆ ಹಾಗೂ ಅಂತರಾಳವನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನವೇ ‘ಹೆಬ್ಬುಲಿ ಕಟ್’. ಚಿತ್ರದ ಫಸ್ಟ್ ಕಾಪಿ ಸಿದ್ಧವಾಗಿದ್ದು, ಜೂನ್ ಅಂತ್ಯಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಚಿತ್ರದ ಕುರಿತು ಭೀಮರಾವ್, ‘ಇದು ನೈಜ ಘಟನೆಯಾಧಾರಿತ ಚಿತ್ರ. ಗ್ರಾಮೀಣ ಭಾಗದ ಸಮಕಾಲೀನ ಯುವಕರ ಆಕರ್ಷಣೆಯನ್ನು ಹಾಸ್ಯ ಹಾಗೂ ಎಮೋಷನ್ಸ್ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬೆಂಗಳೂರು ಹಾಗೂ ರಾಯಚೂರು ಸಮೀಪದ ಚಂದ್ರಬಂಡದಲ್ಲಿ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಿದ್ದೇವೆ. ನಟ ನೀನಾಸಂ ಸತೀಶ್ ನಮ್ಮ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದು, ಅವರ ಜತೆ ಡಾಲಿ ಧನಂಜಯ ಸೇರಿ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ. ಗದಗ ಮೂಲದ ಯುವ ಕಲಾವಿದ ಮೌನೇಶ ನಟರಂಗ ಹಾಗೂ ಬೆಂಗಳೂರಿನ ಅನನ್ಯಾ ನಿಹಾರಿಕಾ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರೂ ಹೊಸಬರಾದ ಕಾರಣ ಭೀಮರಾವ್ 15 ದಿನಗಳ ಕಾಲ ಶೂಟಿಂಗ್ ಸ್ಪಾಟ್‌ನಲ್ಲಿಯೇ ಅವರಿಗೆ ನಟನೆ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ರಾಯಚೂರು ಸೊಗಡಿನ ಸಂಭಾಷಣೆ ಇದ್ದು, ಜತೆಗೆ ಅಲ್ಲಿನ ಜೀವನ ಪದ್ದತಿ ಹೇಗಿದೆ ಎಂಬುದನ್ನು ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಇದೇ ತಿಂಗಳಾಂತ್ಯಕ್ಕೆ ‘ಹೆಬ್ಬುಲಿ ಕಟ್’ ಬಿಡುಗಡೆಗೆ ರೆಡಿಯಾಗಿದೆ.