

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹೆಬ್ಬಟ್ಟಗೇರಿ- ದೇವಸ್ತೂರು ಮಾರ್ಗದ ರಸ್ತೆ ದುಸ್ಥಿತಿ ಖಂಡಿಸಿ ಫೆ.೧೭ ರಂದು ರಸ್ತೆತಡೆ ಪ್ರತಿಭಟನೆ ನಡೆಸಲಾಗುವುದೆಂದು ಹೆಬ್ಬಟ್ಟಗೇರಿ ಗ್ರಾಮಸ್ಥ ಪಿ.ಸಿ. ರಮೇಶ್ ಹೇಳಿದ್ದಾರೆ.
ಹೆಬ್ಬೆಟ್ಟಗೇರಿ- ದೇವಸ್ತೂರು ಗ್ರಾಮದ ರಸ್ತೆ ಅಬ್ಬಿಫಾಲ್ಸ್ ಜಂಕ್ಷನ್‌ನಿಂದ ದೇವಸ್ತೂರು ಗ್ರಾಮದವರಿಗೆ ಸುಮಾರು ೮ ಕಿಲೋಮೀಟರ್ ಸಂಪೂರ್ಣ ಹದಗೆಟ್ಟಿದೆ. ದ್ವಿಚಕ್ರ, ಆಟೋ ಸೇರಿದ್ದಂತೆ ವಾಹನ ಸಂಚಾರಕ್ಕೆ ಅನಾನುಕೂಲಕರವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಗ್ರಾಮಕ್ಕೆ ಬರುತ್ತಿದ್ದ ಶಾಲಾ ವಾಹನ ಬರುತ್ತಿಲ್ಲ. ಇದರಿಂದ ಶಾಲಾ ಮಕ್ಕಳು ಆಟೊದಲ್ಲೇ ತೆರಳಬೇಕಾಗಿದೆ. ಗುಂಡಿಮಯ ರಸ್ತೆಗಳಿಂದಾಗಿ ಆಟೋ ಚಾಲಕರು ದುಬಾರಿ ಹಣ ಕೇಳುತ್ತಿದ್ದಾರೆ. ಇದೀಗ ಆಟೋ ಚಾಲಕರು ಕೂಡ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಕಷ್ಟಕರವಾಗುತ್ತಿದೆ ಎಂದರು.
ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ರಸ್ತೆ ದುರಸ್ಥಿ ಪಡಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯ ರಹಿತವಾಗಿ ದೇವಸ್ತೂರು, ಹೆಬ್ಬೆಟ್ಟಗೇರಿ ಗ್ರಾಮಸ್ಥರೆಲ್ಲರು ಸೇರಿ ಶುಕ್ರವಾರ ರಸ್ತೆತಡೆ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಎರಡು ಗ್ರಾಮದಲ್ಲಿ ೧,೫೦೦ ಮತದಾರರಿದ್ದು, ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಕುಕ್ಕೇರ ಲಕ್ಷ್ಮಣ್, ಬಿ.ವಿ. ಸತೀಶ್ ಪೂಜಾರಿ, ಸ್ಟಾೃನ್ಲಿ ಡೇವಿಡ್ ಗೋಷ್ಠಿಯಲ್ಲಿದ್ದರು.