ರಾಜಕೀಯ ಕೆಸರೆರಚಾಟದಲ್ಲಿ ಶಾಸಕ ಹೆಬ್ಬಾರ

Konemane
Published on

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರು ಕಾರಣ ಇಲ್ಲದೆ, ಅಹಂಕಾರ ಮತ್ತು ಪ್ರತಿಷ್ಠೆಯಿಂದ ಸಂಸದ ಕಾಗೇರಿ ಅವರನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯ ಅನಾಹುತದ ಸಂದರ್ಭದಲ್ಲಿ ಕೇಂದ್ರ, ರಾಜ್ಯದ ನಾಯಕರೊಂದಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಶಾಸಕರು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿರುವುದು ಖೇದಕರ ಎಂದರು.

ಸಜ್ಜನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಹೆಬ್ಬಾರ ತುಚ್ಛವಾಗಿ ಮಾತನಾಡಿದ್ದಾರೆ. ಕಾಗೇರಿ ಶಾಸಕರಾಗುವ ಪೂರ್ವದಲ್ಲಿಯೂ ತತ್ವ ನಿಷ್ಠೆಗೆ ಬದ್ಧರಾಗಿ ನಡೆದವರು. ಪಕ್ಷಾತೀತವಾಗಿ ರಾಜ್ಯಮಟ್ಟದಲ್ಲಿ ಉತ್ತಮ ರಾಜಕಾರಣಿ ಎಂಬ ಹೆಸರು ಪಡೆದಿದ್ದಾರೆ. ಮೂರು ದಶಕಗಳಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಇಂತಹ ಕಾಗೇರಿಯವರ ಬಗ್ಗೆ ಹೆಬ್ಬಾರ ಆಡಿರುವ ಮಾತು ಸರಿಯಲ್ಲ ಎಂದರು.

ಈಗಲೂ ಅವರು ಬಿಜೆಪಿ ಶಾಸಕರು ಎಂದೇ ಎಲ್ಲರೂ ನಂಬಿದ್ದು, ಈಗ ಎಲ್ಲಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಹೆಬ್ಬಾರ ಬಿಜೆಪಿ ಚಿಹ್ನೆಯ ಮೇಲೆ ಆರಿಸಿ ಬಂದು ಪಕ್ಷಕ್ಕೆ ದ್ರೋಹ ಬಗೆಯುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸಿದ ಹೆಬ್ಬಾರ ಅಧಿಕಾರ ಹೋದ ನಂತರ ಮತ್ತೆ ಹಿಂದಕ್ಕೆ ಸರಿದಿದ್ದಾರೆ. ಈಗ ಕಾಂಗ್ರೆಸ್ ಜಾತ್ರೆಯ ಹಿಂದೆ ಹೋಗಲು ಹಾತೊರೆಯುತ್ತಿದ್ದಾರೆ. ನೈತಿಕತೆ ಇದ್ದರೆ, ರಾಜಿನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದರು.

ಬಿಜೆಪಿ ಮಂಡಲಾಧ್ಯಕ್ಷರಾದ ಪ್ರಸಾದ ಹೆಗಡೆ, ಮಂಜುನಾಥ ಪಾಟೀಲ್ ಮುಂಡಗೋಡ, ಬಿಜೆಪಿ ಪ್ರಮುಖರಾದ ಉಮೇಶ ಭಾಗ್ವತ್, ಸುಬ್ಬಣ್ಣ ಬೊಳ್ಮನೆ, ಗಣಪತಿ ಬೋಳಗುಡ್ಡೆ ಇದ್ದರು.

ವಿಜಯವಾಣಿ ಚಿತ್ರ- 22 ವಾಯೆಲ್ಪಿ ಹರಿಪ್ರಕಾಶ ಕೋಣೆಮನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net