ಹೆಬ್ಬಾಳ್ಕರ್ ಪರ ಶಿವಣ್ಣ ಪ್ರಚಾರ

Hebbalkar Para Shivanna Prachar Belgaum
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಿಂಧೊಳ್ಳಿಯಲ್ಲಿ ನಟ ಶಿವರಾಜಕುಮಾರ್ ಶನಿವಾರ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇತರರಿದ್ದರು.
Published on

ಬೆಳಗಾವಿ: ಖ್ಯಾತ ನಟ ಶಿವರಾಜಕುಮಾರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಭರ್ಜರಿ ರೋಡ್ ಶೋ ನಡೆಸಿದರು. ಕ್ಷೇತ್ರದ ಸುಳೇಭಾವಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಸಿಂಧೊಳ್ಳಿ ಗಂಗಾಧರ ನಗರದಿಂದ ರೋಡ್ ಶೋ ಆರಂಭಿಸಿದರು. ಇಲ್ಲಿಯೂ ಶಿವರಾಜಕುಮಾರ್ ಅವರನ್ನು ನೋಡಲು ಜನಸಾಗರವೇ ಆಗಮಿಸಿತ್ತು. ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ… ಯಾರೇ ಕೂಗಾಡಲಿ… ನಾನಿರುವುದು ನಿಮಗಾಗಿ…. ಎಂಬಿತ್ಯಾದಿ ಹಾಡುಗಳನ್ನು ಹಾಡಿದ ಶಿವರಾಜಕುಮಾರ್ ಜನರನ್ನು ರಂಜಿಸಿದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಜಯಘೋಷ ಮೊಳಗಿದವು. ಪುಷ್ಪ ಮಳೆಗೈದು ಸಂತಸ ವ್ಯಕ್ತಪಡಿಸಿದರು.

ಶಿವರಾಜಕುಮಾರ್ ಮಾತನಾಡಿ, ದೇವರ ಆಶೀರ್ವಾದದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲುವುದು ಖಚಿತ. ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮುಂದೆಯೋ ಮಾಡುತ್ತಾರೆ. ಅವರಿಗೆ ಬಹುಮತ ನೀಡಿ ಚುನಾವಣೆಯಲ್ಲಿ ಆರಿಸಿ ತರಬೇಕು ಎಂದು ವಿನಂತಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಇನ್ನು ನಾಲ್ಕೇ ದಿನದಲ್ಲಿ ಚುನಾವಣೆ ಇದೆ. ನನಗೆ ಆಶೀರ್ವಾದ ಮಾಡಿ. ನಾವು, ನೀವೆಲ್ಲ ಸೇರಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡೋಣ ಎಂದರು. ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ವೇಳೆ ಶಿವರಾಜಕುಮಾರ ಪತ್ನಿ ಗೀತಾ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗಂಗಣ್ಣ ಕಲ್ಲೂರ, ಶಂಕರ ಪಾಟೀಲ, ನಾಗೇಶ ದೇಸಾಯಿ, ನಿಲೇಶ ಚಂದಗಡಕರ, ರಜತ ಉಳ್ಳಾಗಡ್ಡಿಮಠ, ಬಸವರಾಜ ಮ್ಯಾಗೋಟಿ, ಮಹಾಂತೇಶ ಮತ್ತಿಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net