ಹೆಬ್ಬಾಲೆಯಲ್ಲಿ ವಿಜೃಂಭಣೆಯ ಬನಶಂಕರಿ ಜಾತ್ರೋತ್ಸವ

hebbale jathre
Published on

ಕುಶಾಲನಗರ:

ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೆಬ್ಬಾಲೆ ಶ್ರೀ ಬನಶಂಕರಿ ದೇವರ ವಾರ್ಷಿಕ ಜಾತ್ರೋತ್ಸವ ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಕಾರ್ತಿಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ ರಾತ್ರಿ ಶಕ್ತಿ ಸ್ವರೂಪಿಣಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಪ್ರತಿ ವರ್ಷದಂತೆ ಅಮ್ಮನವರ ಸನ್ನಿಧಿಯಲ್ಲಿ ಬೆಳಗ್ಗೆ 7 ಘಂಟೆಗೆ ಗಣಪತಿ ಪೂಜೆ, ಪುಣ್ಯಾಹ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ನವಗ್ರಹ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆದವು.

ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಕಾರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ್ ಮತ್ತು ಕಾರ್ಯದರ್ಶಿ ಎಚ್.ಎಚ್. ರಾಜಶೇಖರ್, ಖಜಾಂಜಿ ಸೋಮಣ್ಣ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರ ನೇತೃತ್ವದಲ್ಲಿ ನೆರವೇರಿದವು.

ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಯಿತು. ರಾತ್ರಿ 8 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಯಿತು.

ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ರಾತ್ರಿ 10.30 ಗಂಟೆ ವೇಳೆಗೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ನೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು. ಇಷ್ಟಾರ್ಥ ನೆರವೇರಿಸು ತಾಯೇ ಎಂದು 9 ದಿವಸ ಉಪವಾಸ ವ್ರತ ಆಚರಿಸಿ ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಆಗಮಿಸಿದ ಹರಕೆ ಹೊತ್ತ ಭಕ್ತರು ಅಗ್ನಿಕುಂಡ ತುಳಿದು ದೇವಿಗೆ ಹಣ್ಣುತುಪ್ಪ ಅಭಿಷೇಕ ಮಾಡಿ ಆರ್ಶೀವಾದ ಪಡೆದರು.

ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾಯಾತ್ರೆ ಹಬ್ಬಕ್ಕೆ ವಿಶೇಷ ಮೆರುಗು ನೀಡಿದವು. 10.30 ಗಂಟೆ ನಂತರ ಡಿಜೆ ಸೌಂಡ್ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ವರ್ಷ ಕೇವಲ ಎರಡು ಉತ್ಸವ ಮಂಟಪಗಳನ್ನು ಮಾತ್ರ ಆಯೋಜಿಸಲಾಗಿತ್ತು.

ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯಿತು. ಈ ಹಬ್ಬಕ್ಕೆ ದೇಶ ವಿದೇಶದಲ್ಲಿ ನೆಲಸಿರುವ ಗ್ರಾಮಸ್ಥರು, ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರು.

ದೇವಸ್ಥಾನ ಸಮಿತಿ ವತಿಯಿಂದ ರಾತ್ರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂರ್ತಪಣೆ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net