

ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಅರುಣಕುಮಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಮಾಸಿಕ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ, ಗ್ರಾಪಂ ವ್ಯಾಪ್ತಿಯಲ್ಲಿ ಮೂಲಸೌಲಭ್ಯ ಕಲ್ಪಿಸುವ ಬಗ್ಗೆ ಹಾಗೂ ಸ್ವಚ್ಛತೆ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚಿಸಲಾಯಿತು. ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಪಿಡಿಒ ಅರುಣ ಭಾಸ್ಕರ್ ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷೆ ಲತಾ, ಸದಸ್ಯರಾದ ಎಚ್.ಜೆ.ಪರಮೇಶ್, ಶಿವನಂಜಪ್ಪ, ಚಂದ್ರಶೇಖರ್ ಜೋಗಿ, ಕವಿತಾ, ಯಶಸ್ವಿನಿ, ಪವಿತ್ರಾ ಇದ್ದರು.
ಸಭಾತ್ಯಾಗ: ಇದಕ್ಕೂ ಮುನ್ನ ಅಧ್ಯಕ್ಷೆಯ ನಡೆ ಖಂಡಿಸಿ ಕೆಲ ಸದಸ್ಯರು ಸಭಾ ತ್ಯಾಗ ಮಾಡಿದರು. ಸಾಮಾನ್ಯ ಸಭೆ ಆರಂಭವಾಗುವ ಮೊದಲೇ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಂಜುನಾಥ್ ನೇತೃತ್ವದಲ್ಲಿ ಕೆಲ ಸದಸ್ಯರು ಗದ್ದಲ ಉಂಟು ಮಾಡಲು ಪ್ರಯತ್ನಪಟ್ಟರು. ಈ ವೇಳೆ ಅಧ್ಯಕ್ಷೆ ಅರುಣಕುಮಾರಿ, ‘ಸಭೆ ಅಧಿಕೃತವಾಗಿ ಆರಂಭವಾಗಲಿ. ನಂತರ ನಿಮ್ಮ ಅಹವಾಲು ಸ್ವೀಕರಿಸಿ, ಅವಶ್ಯವಿದ್ದರೆ ಚರ್ಚೆ ಮಾಡಲು ಸಿದ್ಧ’ ಎಂದು ತಿಳಿಸಿದ ಮೇರೆಗೆ ಸುಮ್ಮನಾದರು. ಬಳಿಕ ಸಭೆ ಆರಂಭವಾಗುತ್ತಿದ್ದಂತೆ ಮಂಜುನಾಥ್ ನೇತೃತ್ವದಲ್ಲಿ ಸದಸ್ಯರಾದ ನಾರಾಯಣ, ತನುಕುಮಾರ್, ರತ್ನಮ್ಮ, ಮಹದೇವ, ಪುಟ್ಟಲಕ್ಷ್ಮೀ ಸಭಾತ್ಯಾಗ ಮಾಡಿದರು.
ಅಧ್ಯಕ್ಷರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ಟೆಂಡರ್ ಕರೆಯದೆ ಬಲ್ಬ್ ಖರೀದಿಸಲಾಗಿದೆ. ಕಾಮಗಾರಿಗಳ ಬಗ್ಗೆ ಯಾರ ಗಮನಕ್ಕೆ ತರುತ್ತಿಲ್ಲ. ಗ್ರಾಪಂಗೆ ಸೇರಿದ ಜಾಗ ಉಳಿಸಿಕೊಳ್ಳಲು ಕ್ರಮವಹಿಸಿಲ್ಲ. ಸ್ವಚ್ಛತಾ ಕಾರ್ಯ ಕಾಮಗಾರಿಗೆ ಜಮಾ ಖರ್ಚು ವಿವರದಲ್ಲಿ ಎರಡೆರಡು ಬಾರಿ ಉಲ್ಲೇಖಿಸಲಾಗಿದೆ. ಈ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಉದ್ಧಟತನದಿಂದ ವರ್ತಿಸುತ್ತಾರೆ.
ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ
ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ಎಲ್ಲ ವಿಚಾರಗಳನ್ನು ಚರ್ಚೆ ಮಾಡುವ ಮುನ್ನವೇ ಏಕಾಏಕಿ ಸಭಾತ್ಯಾಗ ಮಾಡಿದ್ದಾರೆ. ಮನವೊಲಿಕೆಗೆ ಸ್ಪಂದಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿದ್ದರೆ ಯಾವುದೇ ರೀತಿಯ ತನಿಖೆಗೆ ಸಿದ್ಧನಿದ್ದೇನೆ.
ಅರುಣಕುಮಾರಿ, ಗ್ರಾಪಂ ಅಧ್ಯಕ್ಷೆ