

ಮಡಿಕೇರಿ:
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮತ್ತು ಹೆಬ್ಬಾಲೆ ಕೆನರಾ ಬ್ಯಾಂಕ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 8,9 ಹಾಗೂ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ತಲಾ 5 ಸಾವಿರ ರೂ. ಚೆಕ್ ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಸ್. ಮಹೇಶ್ ಚೆಕ್ ವಿತರಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ದೇಶದಲ್ಲಿರುವ ಅನೇಕ ಕಾರ್ಪೊರೇಟ್ ಕಂಪನಿಗಳು ತಮ್ಮ ಲಾಭಾಂಶದಲ್ಲಿ ಸ್ವಲ್ಪ ಪ್ರಮಾಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸುತ್ತವೆ. ಹಾಗೆಯೇ ಕೆನರಾ ಬ್ಯಾಂಕ್ ಹೆಬ್ಬಾಲೆ ಶಾಖೆ ಮುಂದಿನ ಶೈಕ್ಷಣಿಕ ಪ್ರಗತಿಗಾಗಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಿಗೆ ಧನಸಹಾಯ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಶಾಲೆಯ ಹಿರಿಯ ಶಿಕ್ಷಕ ಎಂ.ಎನ್. ವೆಂಕಟನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಬ್ಯಾಂಕ್ ನೀಡುವ ಮೊತ್ತವನ್ನು ತಮ್ಮ ಮುಂದಿನ ಶೈಕ್ಷಣಿಕ ಪ್ರಗತಿಗೆ ಸಹಕಾರಿ ಆಗುವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು. ಡಿ. ಕವಿತಾ, ಸಿ.ಡಿ. ಲೋಕೇಶ್ ಮತ್ತಿತರರು ಇದ್ದರು.