ಕ್ರಿಯಾ ಯೋಜನೆಗೆ ಕೊನೆಗೂ ಸಹಿ ಹಾಕಿದ ಅಧ್ಯಕ್ಷೆ

hebbale
Published on

ಕುಶಾಲನಗರ:

ಹದಿನೈದನೇ ಹಣಕಾಸು ಯೋಜನೆಯ ಹಣಕ್ಕೆ ಸಿದ್ದಪಡಿಸಿದ ಕ್ರಿಯಾಯೋಜನೆಗೆ ಸದಸ್ಯರ ಸಾಮೂಹಿಕ ಒತ್ತಡಕ್ಕೆ ಮಣಿದು ಗ್ರಾ.ಪಂ. ಅಧ್ಯಕ್ಷೆ ಸಹಿ ಹಾಕಿದ ಪ್ರಸಂಗ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಿತು. ಪಂಚಾಯಿತಿ ಅಧ್ಯಕ್ಷೆ ಹೆಚ್.ಪಿ. ಅರುಣಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತು ಸಭೆ ಆರಂಭ ಆಗುತ್ತಿದ್ದಂತೆಯೇ ಪಂಚಾಯಿತಿ ಸದಸ್ಯರೆಲ್ಲರೂ ಒಗ್ಗೂಡಿ ಈ ತನಕ ಸಹಿ ಹಾಕದ ಅಧ್ಯಕ್ಷೆಯ ವರ್ತನೆಯನ್ನು ಬಲವಾಗಿ ಖಂಡಿಸಿದರು. ಹದಿನೈದನೆಯ ಹಣಕಾಸು ಯೋಜನೆಯಡಿ ಕಳೆದ 2023 - 24 ನೇ ಸಾಲಿಗೆ ಬಿಡುಗಡೆಯಾಗಿ ಪಂಚಾಯಿತಿ ಖಾತೆಯಲ್ಲಿ ಜಮೆಯಾಗಿದ್ದ 36 ಲಕ್ಷ ರೂ.ಗಳ ಹಣಕ್ಕೆ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ವಾರ್ಡುಗಳ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅಭಿವೃದ್ಧಿ ಮತ್ತು ಸ್ವಚ್ಚತೆಗೆ ಒತ್ತು ನೀಡಬೇಕಿತ್ತು. ಆದರೆ, ಕಳೆದ ಒಂದು ವರ್ಷದಿಂದ ಅಧ್ಯಕ್ಷೆ ಮತ್ತು ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟು ಸಭೆ ನಡೆಯಲು ಬಿಟ್ಟಿರಲಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಯಾವೊಂದು ಅಭಿವೃದ್ದಿ ಕೆಲಸಗಳಾಗಿಲ್ಲ. ಕೊನೇ ಪಕ್ಷ ಸ್ವಚ್ಛತೆಯೂ ಆಗಿಲ್ಲ ಎಂದು ಸದಸ್ಯ ಹೆಚ್.ಎಸ್. ಮಂಜುನಾಥ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

2023 - 24 ನೇ ಸಾಲಿನಲ್ಲಿ ಬಂದ 36 ಲಕ್ಷ ರೂಗಳ ಅನುದಾನವನ್ನು ಮಾರ್ಚ್ 31 ರ ಒಳಗಾಗಿ ನಾವು ಬಳಸದ್ದರೆ ಅದು ವಾಪಸ್ ಹೋಗುತ್ತದೆ. ಪಂಚಾಯಿತಿ ವ್ಯಾಪ್ತಿಯ ಯಾವುದೇ ವಾರ್ಡುಗಳಲ್ಲಿ ನಯಾ ಪೈಸೆಯ ಕಾಮಗಾರಿಗಳು ನಡೆದಿಲ್ಲ. ಚರಂಡಿಗಳ ಸ್ವಚ್ವತೆಯೂ ಆಗಿಲ್ಲ. ಪಂಚಾಯಿತಿ ಅಧ್ಯಕ್ಷೆಯ ವರ್ತನೆಯನ್ನು ಖಂಡಿಸಿ ನಾವುಗಳು ಕಳೆದ ಸಭೆಯಲ್ಲಿ ಆಹೋರಾತ್ರಿ ಪ್ರತಿಭಟನೆಗೂ ಮುಂದಾಗಿದ್ದೆವು. ಕೊನೆಗೆ ಪಿಡಿಒ ಮೇದಪ್ಪ ಮಧ್ಯ ಪ್ರವೇಶ ಮಾಡಿ ಅಧ್ಯಕ್ಷರಿಂದ ಸಹಿ ಹಾಕಿಸುವ ಭರವಸೆ ನೀಡಿದ್ದರು. ಆದರೂ ಇದೀಗ ಮತ್ತೊಂದು ತುರ್ತು ಸಭೆ ನಡೆಸಬೇಕಾಯಿತು ಎಂದು ಪಂಚಾಯಿತಿ ಹಿರಿಯ ಸದಸ್ಯ ಮಹದೇವ್, ನಾರಾಯಣ್, ತನುಕುಮಾರ್ ಹೇಳಿದರು.

ಪಿಡಿಒ ಮೇದಪ್ಪ ಮಾತನಾಡಿ ಸರ್ಕಾರದಿಂದ ಬಂದAಥ ಅನುದಾನಗಳು ಏಕೆ ಖರ್ಚಾಗುತ್ತಿಲ್ಲ ? ನೀವೇನು ಮಾಡ್ತಾ ಇದ್ದೀರಾ ಪಂಚಾಯಿತಿಯವರು ಎಂದು ನಮ್ಮ ಅಧಿಕಾರಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಇನ್ನುಳಿದ ಎರಡು ತಿಂಗಳಲ್ಲಿ ನಾವು ಹಣ ಖರ್ಚು ಮಾಡಲಿಲ್ಲ ಅಂದರೆ ಮಾರ್ಚ್ ಅಂತ್ಯಕ್ಕೆ ಇರುವ 36 ಲಕ್ಷ ರೂ. ಹಣವೂ ವಾಪಸ್ ಹೋಗುತ್ತದೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಆಹೋರಾತ್ರಿ ಧರಣಿಗೆ ಮುಂದಾಗಿದ್ದ ಸದಸ್ಯರನ್ನು ನಾನೇ ಮನವೊಲಿಸಿದ್ದೆ. ಅಧ್ಯಕ್ಷರಿಂದ ಸಹಿ ಹಾಕಿಸುವುದಾಗಿಯೂ ಭರವಸೆ ನೀಡಿದ್ದೆ ಎಂದು ಹೇಳಿದರು.

ಬಸ್ ನಿಲ್ದಾಣ ಸ್ವಚ್ಛವಿಲ್ಲ. ಊರಿನ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಅಂಗಡಿಗಳಲ್ಲಿ ಸಾಮಾನು ಖರೀದಿಸಲು ಹೋದರೆ ಚರಂಡಿಗಳು ವಾಸನೆ ಎಂದು ಜನ ದೂರುತ್ತಿದ್ದಾರೆ. ಎಂದು ಸದಸ್ಯ ತನುಕುಮಾರ್ ಹೇಳಿದರು. ಪಂಚಾಯಿತಿಯಲ್ಲಿ ಇದ್ದ ಪೌರ ಕಾರ್ಮಿಕ ಕೆಲಸದಿಂದ ಬಿಟ್ಟು ಹೋಗಿದ್ದೇಕೆ ? ದಿನಗೂಲಿಯವರನ್ನು ಬಿಟ್ಟಾದರೂ ಸರಿಯೇ ಊರನ್ನು ಸ್ವಚ್ಛಗೊಳಿಸಿ ಎಂದು ಹುಲುಸೆ ವಾರ್ಡ್ ಸದಸ್ಯ ಶಿವನಂಜಪ್ಪ ಹೇಳಿದರು.

ಪೌರಕಾರ್ಮಿಕರನ್ನು ಸದಸ್ಯರು ಸರಿಯಾಗಿ ನಡೆಸಿಕೊಳ್ಳದ ಕಾರಣ ಅವರು ಕೆಲಸಕ್ಕೆ ಬರುತ್ತಿಲ್ಲ ಎಂದು ಅಧ್ಯಕ್ಷೆ ಅರುಣಕುಮಾರಿ ಹೇಳಿದಾಗ, ಅಧ್ಯಕ್ಷರ ಕಿರುಕುಳಕ್ಕೆ ಬೇಸತ್ತು ಪೌರಕಾರ್ಮಿಕರು ಬರುತ್ತಿಲ್ಲ ಎಂದು ಸದಸ್ಯ ತನುಕುಮಾರ್ ಮತ್ತು ನಾರಾಯಣ್ ತಿರುಗೇಟು ನೀಡಿದರು.

ಪದೇ ಪದೇ ಸಭೆ ಕರೆದು ಏಕೆ ನಮ್ಮ ಕೆಲಸ ಕಾರ್ಯಗಳನ್ನು ಹಾಳು ಮಾಡ್ತಾ ಇದ್ದೀರಾ ? ಸರಿಯಾಗಿ ಸಭೆ ನಡೆಸಲು ಆಗದ ಮೇಲೆ ಏಕೆ ತುರ್ತು ಸಭೆ ಕರೆದು ಕಾಲಹರಣ ಮಾಡ್ತಾ ಇದ್ದೀರಾ ? ಜನರ ಕೆಲಸ ಕಾರ್ಯಗಳನ್ನು ಮಾಡಲು ಆಗದ ಮೇಲೆ ಕುರ್ಚಿ ಬಿಡಿ. ಬೇರೆಯವರನ್ನು ಕೂರಿಸಿ ಕೊಂಡು ನಾವು ಊರಿನ ಕೆಲಸ ಕಾರ್ಯಗಳನ್ನು ಮಾಡಿಸ್ತೇವೆ ಎಂದು ಸದಸ್ಯ ನಾರಾಯಣ್ ಸಭಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಅಧ್ಯಕ್ಷೆ ಹಾಗೂ ಸದಸ್ಯರುಗಳ ನಡುವೆ ವಾಕ್ಸಮರ ನಡೆಯಿತು.

ಕ್ರಿಯಾಯೋಜನೆ ಕಡತಕ್ಕೆ ಅಧ್ಯಕ್ಷೆ ಸಹಿ ಹಾಕದ ಕಾರಣ ಸಭೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಬಳಿಕ ಕೊನೆಗೆ ಅಧ್ಯಕ್ಷೆ ಅರುಣಕುಮಾರಿ ಕಡತಕ್ಕೆ ಸಹಿ ಹಾಕಿದರು.

ಉಪಾಧ್ಯಕ್ಷೆ ಲತಾ, ಸದಸ್ಯರಾದ ಯಶಸ್ವಿನಿ, ಹೆಚ್.ಸಿ.ಮಹದೇವ್, ನಾರಾಯಣ್, ಪುಟ್ಟಲಕ್ಷ್ಮಮ್ಮ, ರತ್ನಮ್ಮ, ಚಂದ್ರಶೇಖರ್ ಜೋಗಿ, ಕವಿತಾ, ಕಾರ್ಯದರ್ಶಿ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net