

ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಡಿ.9 ಮತ್ತು 10 ರಂದು ಸಂಜೆ 6.30ಕ್ಕೆ ರಂಗಶಾಲೆ ಮಕ್ಕಳಿಂದ ‘ಹೆಬ್ಬಾಲ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಕನ್ನಡ ಚಲನಚಿತ್ರ ನಿರ್ದೇಶಕ ಜಯತೀರ್ಥ ಅವರು ನಾಟಕವನ್ನು ರಚಿಸಿದ್ದು, ಮಂಡ್ಯ ರಮೇಶ್ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.
ಜಯತೀರ್ಥರ ‘ಹೆಬ್ಬಾಲ’ ನಾಟಕ ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಬಹಳ ವಿಶೇಷವಾದ ಪ್ರಯೋಗ. ಮಕ್ಕಳ ರಂಗಭೂಮಿಗಂತೂ ಹೇಳಿ ಮಾಡಿಸಿದ ನಾಟಕ. ಇಲ್ಲಿ ಭಾಷೆ, ಬದ್ಧತೆ, ಗ್ರಹಿಕೆ, ಕಾಳಜಿ, ಅರಿವು ಎಲ್ಲವೂ ಮುದ ನೀಡುವಂಥದ್ದು. ಇಲ್ಲಿ ಗಾದೆಗಳೇ ಗದ್ಯವಾಗಿದೆ! ಗಾದೆಗಳೇ ಪದ್ಯವಾಗಿದೆ! ಕರ್ನಾಟಕದಲ್ಲಿ ಈಗಲೂ ಪ್ರಜ್ವಲಿಸುವ ಪ್ರಜ್ಞೆಗೆ ಮುಖ್ಯ ಕಾರಣವಾಗಿದ್ದು ನಾಡಿನ ಮೌಖಿಕ ಸಾಹಿತ್ಯ. ವಚನ, ಗಾನ, ಕಾವ್ಯ ಪದ, ಮೇಳ, ಅವಧಾನ ಹೀಗೆ ಹಲವಾರು ಬೇರುಗಳು ಸೂಕ್ಷ್ಮವಾಗಿ ಮತ್ತು ಪ್ರಬಲವಾಗಿ ಪ್ರಭಾವ ಬೀರಿದೆ.
ಈ ಎಲ್ಲ ಚೌಕಟ್ಟಗಳನ್ನು ಮೀರಿ, ಮೂಲ ಜ್ಞಾನವನ್ನು ಕೇವಲ ಸಾಲಿನಲ್ಲಿ ಹೇಳುವ ಜವಾಬ್ದಾರಿಯನ್ನು ಗಾದೆಗಳು ಹೊತ್ತಿವೆ. ಅಂತಹ ನೂರಾರು ಗಾದೆಗಳನ್ನು ಹಗುರವಾಗಿ ಪೋಣಿಸಿ, ಅಜ್ಜನ ಕೈಯಲ್ಲಿ ಮಜವಾದ ಕಥೆಗಳನ್ನು ಹೇಳಿಸುತ್ತ, ಹಳ್ಳಿ ಸೊಗಡನ್ನು ನಾಟಕದ ತುಂಬ ತುಂಬಿದ್ದಾರೆ ಜಯತೀರ್ಥರು. ಹೆಬ್ಬಾಲ ನಾಟಕ ಮನ ತುಂಬಿಸುತ್ತದೆ, ತುಂಬಿದರೂ ತುಳುಕಿಸುತ್ತದೆ.