

ಮೈಸೂರು: ಹೆಬ್ಬಾಳ್ ಕೈಗಾರಿಕಾ ಪ್ರದೇಶದ ಸಿಪಿಟ್ ಎದುರು ಇರುವ ಎಸ್‌ಬಿಐ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರ ಕಣ್ಣಿಗೆ ಕಾರದ ಪುಡಿ ಎರಚಿ 6.5 ಲಕ್ಷ ರೂ. ನಗದು ದರೋಡೆ ಮಾಡಿದ್ದ 5 ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಿವಾಸಿ ಸೂರಜ್, ನಗರದ ನಿವಾಸಿಗಳಾದ ಶ್ರೀನಿವಾಸ, ಅರವಿಂದ, ಆರ್.ಕಿರಣ್, ಎನ್.ಕಿರಣ್ ಬಂಧಿತರು. ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ದಸರಗುಪ್ಪೆ ಎಸ್‌ಎಸ್‌ಸಿ ಪ್ರೈವೆಟ್ ಲಿಮಿಟೆಡ್ ಕಂಪನಿಯ ಸಿಬ್ಬಂದಿ ಕೆ. ತುಳಸೀದಾಸ್ ಜು.26 ರಂದು ಬ್ಯಾಂಕ್‌ಗೆ ಹಣ ಪಾವತಿಸಲು ವಾಹನದಲ್ಲಿ ತೆರಳುತ್ತಿದ್ದರು. ತುಳಸೀದಾಸ್ ಅವರನ್ನು ಹಿಂಬಾಲಿಸಿದ ಆರೋಪಿಗಳು ಅವರು ಕಾರು ಇಳಿಯುತ್ತಿದ್ದಂತೆಯೇ ಕಣ್ಣಿಗೆ ಕಾರದ ಪುಡಿ ಎರಚಿ ಹಣ ಕಸಿದು ಪರಾರಿಯಾದರು. ಆರೋಪಿ ಸೂರಜ್ ಈ ಹಿಂದೆ ಇದೇ ಕಂಪನಿಯಲ್ಲಿ ಕಾರು ಚಾಲಕನಾಗಿದ್ದ. ಈತನಿಗೆ ತುಳಸೀದಾಸ್ ಪ್ರತಿನಿತ್ಯ ಬ್ಯಾಂಕ್‌ಗೆ ಹಣ ಪಾವತಿ ಮಾಡಲು ಬರುವ ವಿಚಾರ ತಿಳಿದಿತ್ತು. ಆರೋಪಿ ಗಳಿಂದ 4,35,000 ರೂ. ನಗದು, ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಅನ್ನು ವಶಕ್ಕೆ ಪಡೆಯಲಾಗಿದೆ.
ಡಿಸಿಪಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗ ಎಸಿಪಿ ಗಜೇಂದ್ರ ಪ್ರಸಾದ್ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಬ್ಬಾಳ್ ಇನ್ಸ್‌ಪೆಕ್ಟರ್ ಕೆ.ಆರ್. ಪ್ರಸಾದ್, ಪಿಎಸ್‌ಐಗಳಾದ ಕೀರ್ತಿ ಮತ್ತು ಅಂಬಮ್ಮ, ಸಿಬ್ಬಂದಿ ಮಲ್ಲಿಕಾರ್ಜುನಪ್ಪ, ರವಿಕುಮಾರ್, ರಾಘವೇಂದ್ರ, ಹರೀಶ್, ಮಹೇಶ್, ಹೊಸಮನಿ, ವೆಂಕಟೇಶ್, ಲಿಖಿತ್, ಸುನೀಲ್, ಚಂದ್ರಶೇಖರ್ , ಎಂ.ನಾಗರಾಜು, ಮೋಹನ್ ಮತ್ತು ಆಶಾ ಪಾಲ್ಗೊಂಡಿದ್ದರು.