ಆ.18ಕ್ಕೆ ಹೆಬ್ಬಾಳ ಮೇಲ್ಸೇತುವೆಯ ಲೂಪ್ ಓಪನ್

hebbala loop
Published on

ಬೆಂಗಳೂರು: ಬಹುನಿರೀಕ್ಷಿತ ಹೆಬ್ಬಾಳ ಮೇಲ್ಸೇತುವೆಯ ವಿಸ್ತರಿತ ಯೋಜನೆಯಡಿ ನಿರ್ಮಿಸಿರುವ ಕೆ.ಆರ್.ಪುರ ಲೂಪ್ ಭಾನುವಾರ (ಆ.18) ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಬಿಡಿಎ ನಿರ್ಧರಿಸಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ತೆರಳಲು ಹೆಬ್ಬಾಳ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಕೈಗೆತ್ತಿಕೊಂಡಿರುವ ಈ ಯೋಜನೆಯ ಮೊದಲ ಹಂತವಾಗಿ ಕೆ.ಆರ್.ಪುರ ಲೂಪ್ ಕಾಮಗಾರಿ ಈಗಷ್ಟೇ ಪೂರ್ಣಗೊಂಡಿದೆ. ಲೂಪ್‌ನಲ್ಲಿ ವಿವಿಧ ಗಾತ್ರ/ತೂಕದ ವಾಹನಗಳ ಓಡಾಟಕ್ಕಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಶನಿವಾರದವರೆಗೂ ಈ ಪರೀಕ್ಷೆ ನಡೆಯಲಿದ್ದು, ಭಾನುವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಲೂಪ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡುವವರಿದ್ದಾರೆ.

ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ಕೆ.ಆರ್.ಪುರ ಕಡೆಯಿಂದ ನಗರದತ್ತ ಮುಕ್ತ ಎಡ ತಿರುವು ಪಡೆದು ಮುಂದೆ ಸಾಗುವ ರೀತಿ ಲೂಪ್ ನಿರ್ಮಿಸಲಾಗಿದೆ. 700 ಮೀಟರ್ ಉದ್ದವಿರುವ ಈ ಲೂಪ್ 2/3 ಲೇನ್ ಹೊಂದಿದೆ. ಲೂಪ್​ ಆರಂಭವಾಗುವ ಸ್ಥಳದಿಂದ ಮುಖ್ಯ ಕ್ಯಾರೇಜ್‌ಗೆ ಸಂಪರ್ಕಿಸುವ ಜಾಗದವರೆಗೆ 200 ಮೀ. ಇದ್ದು, ಎರಡು ಪಥ ಹೊಂದಿದೆ. ಇದು ಹಳೆಯ ಭಾಗವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕೂಡು ಸ್ಥಳದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಕೊನೆಗೊಳ್ಳುವ ಲೂಪ್​ 3 ಪಥವಿದ್ದು, 500 ಮೀ. ಉದ್ದವಿದೆ.

ಡೌನ್ ರಾಂಪ್ ಬಳಿ ಅಪಘಾತ ಸಾಧ್ಯತೆ?:

ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಹೊಸ ರಾಂಪ್ ಹಾದಿ ಕೊನೆಗೊಳ್ಳಲಿದ್ದು, ಇಲ್ಲಿರುವ ಸರ್ವಿಸ್ ರಸ್ತೆ ಹಾಗೂ ಮುಖ್ಯ ಕ್ಯಾರೇಜ್ ಲೇನ್‌ಗೆ ವಾಹನಗಳು ನೇರವಾಗಿ ಪ್ರವೇಶ ಪಡೆಯುತ್ತವೆ. ಡೌನ್ ರಾಂಪ್​ ಮೂಲಕ ವೇಗವಾಗಿ ಬರುವ ವಾಹನಗಳು ಮುಖ್ಯ ರಸ್ತೆಗೆ ಸಂಪರ್ಕಿಸುವ ಜಾಗದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸದ್ಯ ಮೇಲ್ಸೇತವೆಯ ಮೇಲ್ಭಾಗ ಹಾಗೂ ಕೆಳ ಭಾಗದಿಂದ ವಾಹನಗಳು ಮುಖ್ಯ ಕ್ಯಾರೇಜ್ ಹಾಗೂ ಸರ್ವಿಸ್ ರಸ್ತೆಯತ್ತ ಸಾಗುತ್ತಿವೆ. ಇದಕ್ಕೀಗ ಹೊಸದಾಗಿ ನಿರ್ಮಿಸಿರುವ ರಾಂಪ್ ಮೂಲಕ ಹಾದುಬರುವ ವೆಹಿಕಲ್‌ಗಳು ಸೇರಿಕೊಳ್ಳುವುದರಿಂದ ಪರಸ್ಪರ ಅಡ್ಡ ಬಂದು ಮುಂದೆ ಸಾಗಲು ಪೈಪೋಟಿ ನಡೆಸಿದರೆ ಅಪಘಾತ ನಿಶ್ಚಿತ.

ಈ ಸಮಸ್ಯೆಯನ್ನು ತಪ್ಪಿಸಲು ಸಂಚಾರ ಪೊಲೀಸರು ಪೂರ್ಣ ಪ್ರಮಾಣದ ಪರಿಹಾರ ಮಾಡಿಲ್ಲ. ಹೆಬ್ಬಾಳ ಬಸ್ ನಿಲ್ದಾಣದ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಚಲಿಸುವ ವಾಹನಗಳನ್ನು (ಬಿಎಂಟಿಸಿ ಬಸ್ ಸೇರಿ) ನೇರವಾಗಿ ಸರ್ವಿಸ್ ರಸ್ತೆಯಲ್ಲೇ ತೆರಳಲು ಅವಕಾಶ ಕಲ್ಪಿಸಬೇಕು. ಮೇಲ್ಸೇತುವೆ ಮೂಲಕ ಬರುವ ವಾಹನಗಳು ಮುಖ್ಯ ಕ್ಯಾರೇಜ್‌ನಲ್ಲೇ ಸಾಗುವ ರೀತಿ ವ್ಯವಸ್ಥೆ ಮಾಡಬೇಕಿದೆ. ಹೀಗೆ ಮಾಡಿದರಷ್ಟೇ ಡೌನ್ ರಾಂಪ್‌ನಿಂದ ವಾಹನಗಳು ಮುಖ್ಯ ಕ್ಯಾರೇಜ್ ಮೂಲಕ ಮೇಖ್ರಿ ವೃತ್ತದತ್ತ ಸರಾಗವಾಗಿ ಸಾಗಬಹುದಾಗಿದೆ. ಜತೆಗೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಸರ್ವಿಸ್ ರಸ್ತೆ ಉದ್ದಕ್ಕೂ ವಾಹನ ನಿಲುಗಡೆಯನ್ನು ನಿಷೇಧಿಸಿದರೆ ಟ್ರಾಫಿಕ್ ದಟ್ಟಣೆ ಉಂಟಾಗದು ಎಂಬ ಸಲಹೆ ಕೇಳಿಬಂದಿದೆ.

ಸೂಚನಾಫಲಕ ಅಳವಡಿಕೆಗೆ ಕ್ರಮ:

ಪ್ರಾಯೋಗಿಕ ಪರೀಕ್ಷೆ ವೇಳೆ ಗಮನಿಸಲಾಗುವ ಸಂಚಾರ ಸಂಬಂಧಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಚಾರ ಪೊಲೀಸರು ಆದ್ಯತೆ ನೀಡಿದ್ದಾರೆ. ಜತೆಗೆ ಸವಾರರಿಗೆ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತ ಜಾಗವನ್ನು ನಿಗದಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಬಿಡಿಎ ಕೂಡ ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net