

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ವಿಸ್ತರಣಾ ಯೋಜನೆಯ ಭಾಗವಾದ ಕೆ.ಆರ್.ಪುರ ಲೂಪ್ ಸೋಮವಾರ (ಆ.18) ಸಂಚಾರಕ್ಕೆ ಮುಕ್ತವಾಗಲಿದ್ದು, 500 ಮೀ. ಉದ್ದದ ಈ ಎಲಿವೇಟೆಡ್ ರಸ್ತೆಯನ್ನು ನಿರ್ಮಿಸಲು ಬರೋಬರಿ 31 ತಿಂಗಳು ಹಿಡಿದಿದೆ.
ನಗರದಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ನೇರ ಸಂಪರ್ಕ ಕಲ್ಪಿಸುವ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ಸುಗಮಗೊಳಿಸಲು ಸಮಗ್ರ ಯೋಜನೆ ಅನುಷ್ಠಾನವನ್ನು ಬಿಡಿಎ ವಹಿಸಿದೆ. ಒಟ್ಟು 225 ಕೋಟಿ ರೂ. ವೆಚ್ಚದ ಈ ಯೋಜನೆ 4 ಹಂತವನ್ನು ಒಳಗೊಂಡಿದೆ (ಪರಿಷ್ಕೃತ ಮೊತ್ತ 350 ಕೋಟಿ ರೂ.). ಮೊದಲ ಭಾಗವಾಗಿ ಕೆ.ಆರ್.ಪುರ ಕಡೆಯಿಂದ ನಗರದತ್ತ ಸಂಚರಿಸುವ ವಾಹನಗಳು ಮುಕ್ತ ಎಡತಿರುವು ಪಡೆದು ಮುಂದುವರಿಯುವ ರೀತಿ ಲೂಪ್ ವಿನ್ಯಾಸಗೊಳಿಸಲಾಗಿದೆ. ಲೂಪ್ ನಿರ್ಮಿಸಲು 70 ಕೋಟಿ ರೂ. ಅಂದಾಜಿಸಿದ್ದು, ಕಾಮಗಾರಿ ವಿಳಂಬ ಆಗಿರುವುದರಿಂದ 94 ಕೋಟಿ ರೂ.ಗೆ ಏರಿದೆ.
2023ರ ಜ.1ರಂದು ಬಿಡಿಎನ ಆಗಿನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಲೂಪ್ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದ್ದರು. 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಗುತ್ತಿಗೆದಾರರ ನಿಧಾನ ಗತಿಯ ಕೆಲಸ, ಬಿಡಿಎ ಅಧಿಕಾರಿಗಳ ಮೇಲ್ವಿಚಾರಣೆ ವೈಲ್ಯ, ವಾಹನ ದಟ್ಟಣೆ ವೇಳೆಯಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ, ಕಾಮಗಾರಿ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಚಾರ ಪೊಲೀಸರ ಹಿಂಜರಿಕೆಯಿಂದಾಗಿ ಲೂಪ್ ಕಾಲಮಿತಿಯೊಳಗೆ ಪೂರ್ಣವಾಗದೆ ವಿಳಂಬವಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
700 ಮೀ. ಉದ್ದದ ಲೂಪ್:
ಕೆ.ಆರ್.ಪುರ ಕಡೆಯಿಂದ ನಗರದತ್ತ ಧಾವಿಸಲು ಈ ಹಿಂದೆ ಇದ್ದ ರಾಂಪ್‌ಅನ್ನು ಹಾಲಿ ಮೇಲ್ಸೇತುವೆಗೆ ಸಂಪರ್ಕಿಸಲಾಗಿತ್ತು. ಇದರಿಂದ ಮೇಲ್ಸೇತುವೆ ಬಳಿ ಸಂದಿಸುತ್ತಿದ್ದ ರಾಂಪ್ ಸ್ಥಳದಲ್ಲಿ ವಾಹನ ಸಂಚಾರ ನಿಧಾನಗೊಂಡು ದಟ್ಟಣೆಗೆ ಕಾರಣವಾಗಿತ್ತು. ಇದೇ ರೀತಿ ತುಮಕೂರು ರಸ್ತೆ ಕಡೆಯಿಂದ ನಗರದತ್ತ ತೆರಲು ಇದ್ದ ವೃತ್ತಾಕಾರದ ಲೂಪ್ ಕೂಡ ಸಮಸ್ಯೆ ತಂದೊಡ್ಡಿತ್ತು. ಈ ಸಮಸ್ಯೆ ನೀಗಿಸಲು ಏರ್‌ಪೋಟ್ ಕಡೆಯಿಂದ ಬರುವ ಹಾಗೂ ಕೆ.ಆರ್.ಪುರದಿಂದ ನಗರದತ್ತ ಚಲಿಸುವ ವಾಹನಗಳಿಗೆ ಅನುಕೂಲ ಕಲ್ಪಿಸಲು ಮೇಲ್ಸೇತುವೆ ಬದಿಯಲ್ಲೇ ಹೊಸದಾಗಿ ಪ್ರತ್ಯೇಕ ಎಲಿವೇಟೆಡ್ ರಸ್ತೆ ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕೆ.ಆರ್.ಪುರ ಲೂಪ್‌ಅನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆ ವರೆಗೆ ವಿಸ್ತರಿಸಲಾಗಿದೆ.
ಸರಿಸುಮಾರು 700 ಮೀ. ಉದ್ದವಿರುವ ಈ ಲೂಪ್‌ನ ಅಪ್ ರಾಂಪ್‌ಅನ್ನು 200 ಮೀ. ವರೆಗೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಲ್ಲಿಂದ ಮುಂದಕ್ಕೆ ಎಲಿವೇಟೆಡ್ ರಸ್ತೆಯಾಗಿ ಹೊಸದಾಗಿ ನಿರ್ಮಿಸಲಾಗಿದೆ. 25 ವರ್ಷದ ಹಿಂದೆ ನಿರ್ಮಿಸಿದ್ದ ಹಳೆಯ ಅಪ್ ರಾಂಪ್ ಈಗಲೂ ಸಂಚಾರಕ್ಕೆ ಯೋಗ್ಯವಾಗಿದೆ ಎಂಬುದನ್ನು ಬಿಡಿಎ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ ಹಳೆಯ ಹಾಗೂ ಹೊಸ ರಾಂಪ್‌ಅನ್ನು ಜೋಡಿಸಲಾಗಿದೆ. ಅಪ್ ರಾಂಪ್ 2 ಪಥವಿದ್ದು, ಹೊಸ ಎಲಿವೇಟೆಡ್ ರಸ್ತೆ 500 ಮೀ. ಉದ್ದವಿದೆ (3 ಪಥ). ಸದ್ಯದಲ್ಲೇ 2ನೇ ಹಂತವಾಗಿ ಹೆಬ್ಬಾಳ ಕೆರೆ ಕೋಡಿ ಕಡೆಯಿಂದ ನಗರದತ್ತ ಧಾವಿಸುವ ಮೇಲ್ಸೇತುವೆಗೆ ಹೊಂದಿಕೊಂಡಂತೆ ಎರೆಡು ಪಥವುಳ್ಳ ಹೊಸ ಎಲಿವೇಟೆಡ್ ರಸ್ತೆ ನಿರ್ಮಿಸಲು ಬಿಡಿಎ ಮುಂದಾಗಿದೆ.
ಲೂಪ್ ಉದ್ಘಾಟನೆ ಇಂದು:
ಕೆ.ಆರ್.ಪುರ ಲೂಪ್ ಸಿದ್ಧಗೊಂಡಿದ್ದು ಸೋಮವಾರ (ಆ.18) ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಮೊದಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸುವವರಿದ್ದರು. ಸ್ಥಳೀಯ ಶಾಸಕ ಹಾಗೂ ಸಚಿವ ಬೈರತಿ ಸುರೇಶ್ ಅವರು ಸಿಎಂ ಅವರಿಂದ ಲೋಕಾರ್ಪಣೆ ಮಾಡಿಸಲು ಸಿದ್ದರಾಮಯ್ಯ ಅವರನ್ನು ಮನವೋಲಿಸಿ ಆ.15ರ ಬದಲು ಹೊಸ ದಿನಾಂಕವನ್ನು ನಿಗದಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ, ಸ್ಥಳೀಯ ಸಂಸದರು, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.