

ಉಪ್ಪಿನಂಗಡಿ: ಬುಧವಾರ ರಾತ್ರಿ ರೌದ್ರರೂಪ ತಾಳಿದ ನೇತ್ರಾವತಿ ನದಿ ಏಕಾಏಕಿ ಅಪಾಯದ ಮಟ್ಟ ಮೀರಿ ಹರಿದು ಜನತೆಯನ್ನು ನೆರೆ ಭೀತಿಗೆ ಒಳಪಡಿಸಿತು.
ಮಂಗಳವಾರವಷ್ಟೇ ನೆರೆ ಪೀಡಿತ ಪ್ರದೇಶದ ಮಂದಿ ಸ್ಥಳಾಂತರಗೊಂಡಿದ್ದ ಸಾಮಾನು ಸಾಮಾಗ್ರಿ ಬುಧವಾರ ಮತ್ತೆ ಮನೆಗಳಿಗೆ ತಂದು ಜೊಡಿಸಿಟ್ಟ ಬೆನ್ನಿಗೆ ಮತ್ತೆ ನದಿ ನೆರೆ ಭೀತಿ ಮೂಡಿಸಿದ್ದು, ಅವರೆಲ್ಲರನ್ನೂ ನಿದ್ರೆಗೆಡುವಂತೆ ಮಾಡಿತ್ತು. ಪಂಜಳದಲ್ಲಿ ನದಿ ನೀರು ರಾಷ್ಟ್ರೀಯ ಹೆದ್ದಾರಿ, ಹಲವು ತಗ್ಗು ಪ್ರದೇಶಗಳಿಗೆ ನುಗ್ಗಿ ನಿವಾಸಿಗರನ್ನು ಭೀತಿಗೆ ಒಳಪಡಿಸಿತ್ತು. ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿ ತೋಡಿನಲ್ಲಿ ನೀರು ಉಕ್ಕಿ ಹರಿದು ಉಪ್ಪಿನಂಗಡಿ ಬೆಳ್ತಂಗಡಿ ನಡುವಣ ರಸ್ತೆಯನ್ನು ಆವರಿಸಿದ ಕಾರಣ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.
ಮಂಗಳವಾರ ರಾತ್ರಿಯಿಡೀ ನೆರೆ ಪೀಡಿತ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆಸಿ ದಣಿದಿದ್ದ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡ, ಕಂದಾಯ ಇಲಾಖಾಧಿಕಾರಿಗಳ ತಂಡ ಬುಧವಾರ ರಾತ್ರಿ ಅನಿರೀಕ್ಷಿತ ಪ್ರವಾಹದ ಭೀತಿ ಮೂಡಿದಾಗ ತಕ್ಷಣಕ್ಕೆ ಅಪಾಯ ಪ್ರದೇಶದ ನಿವಾಸಿಗರಿಗೆ ಎಚ್ಚರಿಕೆ ನೀಡಿ ರಾತ್ರಿಯಿಡೀ ಕಾರ್ಯೋನ್ಮುಖರಾಗಿದ್ದರು. ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿಪ್ರಭು, ಅಪಾಯದ ಸುಳಿವು ದೊರೆತಾಕ್ಷಣ ತನ್ನ ಮಗಳು ಅಳಿಯನೊಡಗೂಡಿ ತಗ್ಗು ಪ್ರದೇಶ, ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಿ ಪಂಚಾಯಿತಿ ಆಡಳಿತದಿಂದ ಧ್ವನಿವರ್ಧಕದ ಮೂಲಕ ನಿವಾಸಿಗರನ್ನು ಎಚ್ಚರಿಸುವ ಕಾರ್ಯ ನಡೆಸಿದರು. ಎಸ್‌ಕೆಎಸ್‌ಎಫ್‌ನ ವಿಖಾಯ ತಂಡ, ವಿಶ್ವಹಿಂದು ಪರಿಷತ್ ಬಜರಂಗ ದಳದ ಸ್ವಯಂಸೇವಕರ ತಂಡ ಅಪಾಯವನ್ನೆದುರಿಸಲು ಗುರುವಾರ ನಸುಕಿನವರೆಗೆ ಸನ್ನದರಾಗಿದ್ದುದ್ದು ಶ್ಲಾಘನೀಯವಾಗಿತ್ತು.