

ತೀರ್ಥಹಳ್ಳಿ: ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಆಗುಂಬೆ ಘಾಟಿಯ 6, 7 ಮತ್ತು 11ನೇ ತಿರುವಿನಲ್ಲಿ ರಸ್ತೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಜು.27ರಿಂದ ಸೆಪ್ಟೆಂಬರ್ 15ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ರಸ್ತೆ ಕುಸಿದಿರುವುದಲ್ಲದೆ ಘಾಟಿಯ ತಡೆಗೋಡೆ ಕುಸಿಯುತ್ತಿದ್ದು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೋರಿಕೆಯಂತೆ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತೀರ್ಥಹಳ್ಳಿ ಮಾರ್ಗವಾಗಿ ಉಡುಪಿಗೆ ಹೋಗುವ ವಾಹನಗಳು ಯಡೂರು, ಮಾಸ್ತಿಕಟ್ಟೆ, ಹುಲಿಕಲ್, ಸಿದ್ದಾಪುರ, ಕುಂದಾಪುರ ಮಾರ್ಗವಾಗಿ ಉಡುಪಿ ತಲುಪಬಹುದಾಗಿದೆ. ಇನ್ನೊಂದು ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಮಾಳಾಘಾಟ್, ಕಾರ್ಕಳ ಮಾರ್ಗವಾಗಿಯೂ ಉಡುಪಿ ತಲುಪಬಹುದಾಗಿದೆ.