ಮಳೆ ಆರ್ಭಟ, ಸಿಡಿಲಿಗೆ 4 ಬಲಿ: ರಾಜ್ಯದಲ್ಲಿ 4 ದಿನ ಭಾರಿ ಮಳೆ, 6 ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

Rain
Published on

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಾರುತಗಳು ಜೂ.5ರ ಬಳಿಕ ಪ್ರವೇಶಿಸುವುದು ನಿಕ್ಕಿಯಾಗಿದ್ದರೂ, ಮುಂದಿನ 24 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಳ್ಳಲಿರುವ ಚಂಡಮಾರುತದ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಭಾನುವಾರ ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಚಂಡಮಾರುತ ಪ್ರಭಾವ ದಿಂದ ಇನ್ನೂ 4 ದಿನ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಮುಂದಿನ 2 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ 115.6 ಮಿ.ಮೀ ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ. ಆದರೆ ಜೂ. 3ರ ನಂತರ ರಾಜ್ಯದಲ್ಲಿ ತುಸು ಮಳೆ ಕಡಿಮೆಯಾಗಲಿದೆ.

ಸಿಡಿಲಿಗೆ ಬಲಿ: ಹುಬ್ಬಳ್ಳಿಯ ಅಮರಗೋಳ ಚಿಕ್ಕೇರಿ ಪ್ಲಾಟ್​ನ ಬಾಲಕ ಆಕಾಶ ಸಹದೇವ ಸಾಯಣ್ಣವರ (14) ಕುರಿ ಮೇಯಿಸಲು ಹೊಲಕ್ಕೆ ತೆರಳಿದ್ದ ವೇಳೆ ಸಿಡಿಲು ಬಡಿದು ಅಸುನೀಗಿದ್ದಾನೆ. ಹಿರೇಕೆರೂರು ತಾಲೂಕಿನ ಹೊಸನಿಡನೇಗಿಲು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮಂಜವ್ವ ಮಂಜಪ್ಪ ನಾಯ್ಕರ (42) ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಶೋಭಾ ಚಂದ್ರಕಾಂತ ಗೌಡ (37) ಸಿಡಿಲಿಗೆ ಬಲಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆ 114 ಡಣಾಪುರ ಗ್ರಾಮದಲ್ಲಿ ಹೊಲದಲ್ಲಿ ಅಲಸಂದಿ ಬಿಡಿಸುವಾಗ ಸಿಡಿಲಿನ ಸದ್ದಿಗೆ ಹೃದಯಾಘಾತವಾಗಿ ರೈತ ಯಮನೂರು ಸಾಬ್ (38) ಕೊನೆಯುಸಿರೆಳೆದಿದ್ದಾರೆ. ಉಡುಪಿ ಜಿಲ್ಲೆಯ ಹೆಂಗವಳ್ಳಿ ಗ್ರಾಮ ದಲ್ಲಿ ದೊಡ್ಡಿಗೆ ಸಿಡಿಲೆರಗಿ 1 ಕರು, 2ದನ ಮೃತಪಟ್ಟಿವೆ.

ಎಲ್ಲೆಲ್ಲಿ ಮಳೆ?: ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿಯಲ್ಲಿ ಅತಿ ಹೆಚ್ಚು 23.1 ಮಿ.ಮೀ ಮಳೆ ಸುರಿದಿದೆ. ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ನಿರಂತರ ಸುರಿದ ಮಳೆಯಿಂದ ನರಗುಂದ ಗುಡ್ಡದ ಕೃಷ್ಣಾನಗರ ಬಡಾವಣೆಯ ಮನೆಗಳಿಗೆ ನೀರು ನುಗ್ಗಿತ್ತು. ಕರ್ನಾಟಕದ ಕೇಸರಿ ಎಂದೇ ಖ್ಯಾತಿ ಹೊಂದಿದ್ದ ದಿ. ಜಗನ್ನಾಥರಾವ್ ಜೋಷಿ ಸ್ಮಾರಕ ಭವನಕ್ಕೆ ಸಿಡಿಲು ಬಡಿದು ನಾಲ್ಕೈದು ಅಡಿಯಷ್ಟು ಗೋಡೆ ಬಿರುಕು ಬಿಟ್ಟಿದೆ. ವಿಜಯಪುರ ನಗರ ಸೇರಿ ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಚಡಚಣ, ಬಸನವನ ಬಾಗೇವಾಡಿ ತಾಲೂಕು ವ್ಯಾಪ್ತಿಯಲ್ಲಿ ಮಳೆ ಸುರಿದಿದೆ. ಬೆಳಗಾವಿ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿದಿದ್ದು, ವಿವಿಧ ತಗ್ಗು ಪ್ರದೇಶದಲ್ಲಿರುವ ಮನೆಗಳು ಹಾಗೂ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿತ್ತು. ದ.ಕ.ಜಿಲ್ಲೆಯ ವಿವಿಧೆಡೆ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ.

ಕೇರಳಕ್ಕೆ ಇಂದು ಮುಂಗಾರು

ನಿರೀಕ್ಷೆಯಂತೆ ಕೇರಳಕ್ಕೆ ಸೋಮವಾರ ( ಜೂ. 1) ಮುಂಗಾರು ಆಗಮಿಸಲಿದೆ. ಮಳೆಯ ಮಾರುತಗಳು ಈಗಾಗಲೇ ಕೇರಳದಲ್ಲಿದ್ದು, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮುಂದಿನ 24 ಗಂಟೆಯಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಈ ಚಂಡಮಾರುತದ ಪರಿಣಾಮದಿಂದ ಕರ್ನಾಟಕಕ್ಕಿಂತ ಗುಜರಾತ್ ಹಾಗೂ ಮಹಾರಾಷ್ಟ್ರದ ಉತ್ತರ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ. ಆದರೆ, ಸೂಪರ್ ಸೈಕ್ಲೋನ್ ಆಗುವ ಸಾಧ್ಯತೆ ಕಡಿಮೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net