ಬಳ್ಳಾರಿ : ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ದೀಪಾವಳಿ ದಿನದಂದೇ ಸುರಿಯಿತು. ಗ್ರಾಮೀಣ ಹಾಗೂ ನಗರಾದ್ಯಂತ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದರಿಂದ ವಾತವರಣ ತಂಪೇರಿತು. ದೀಪಾವಳಿ ಹಬ್ಬಕ್ಕಾಗಿ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರು ಮಳೆಯಲ್ಲೇ ನೆನೆದರು. ಬೀದಿಬದಿ ವ್ಯಾಪಾರಿಗಳು ಹಾಗೂ ತರಕಾರಿ ವ್ಯಾಪಾರಿಗಳಿಗೆ ತೊಂದರೆಯಾಯಿತು. ನಗರದಲ್ಲಿ ದೀಪಾವಳಿಯ ಭರ್ಜರಿ ನಿರೀಕ್ಷೆಯಲ್ಲಿದ್ದ ಹೂ ಬೆಳೆಗಾರರು ಹಾಗೂ ಪಟಾಕಿ ವ್ಯಾಪಾರಕ್ಕೆ ಆಡಚಣೆ ಉಂಟಾಯಿತು. ರೈಲು ಕೆಳಸೇತುವೆಯಲ್ಲಿ ಮಳೆ ಅಬ್ಬರಕ್ಕೆ ಜಲಾವೃತಗೊಂಡವು. ಇದರಿಂದ ವಾಹನಗಳು ಹಾಗೂ ಪಾದಚಾರಿಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದರು. ಗ್ರಾಮೀಣ ಭಾಗದಲ್ಲಿ ಮುಂಗಾರು ಹಂಗಾಮಿನ ಮೆಕ್ಕಜೋಳ ಕಟಾವುಗೆ ಬಂದಿದ್ದು, ಮಳೆ ಬಿಡುವು ನೀಡಿದ್ದರಿಂದ ರೈತರು ಕಟಾವು ಸಿದ್ಧತೆ ಕೈಗೊಂಡಿದ್ದರು. ಮತ್ತೆ ಮಳೆ ಆರಂಭವಾಗಿರುವುದರಿಂದ ರೈತರು ಚಿಂತೆಗೀಡು ಮಾಡುವಂತೆ ಮಾಡಿತು. ನಗರದ ವಡ್ಡರಬಂಡೆಯ ಬ್ಯಾಂಕ್ ಬರೋಡ ಮುಂಭಾಗದಲ್ಲಿ ಮಳೆಯಿಂದ ವಿದ್ಯುತ್ ತಂತಿ ಕಟ್‌ಯಾಗಿ ರಸ್ತೆಗೆ ಬಿದಿರುವ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡಿತು.
====