ಅರಸೀಕೆರೆ ವಿವಿಧೆಡೆ ಧಾರಾಕಾರ ಮಳೆ

IMG_20250426_152016
ಅರಸೀಕೆರೆ ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಡಿಪೋ ಆವರಣದಲ್ಲಿನ ಮಾವಿನ ಮರ ಮುರಿದು ಬಿದ್ದಿರುವುದು.
Published on

ಅರಸೀಕೆರೆ: ನಗರದ ವಿವಿಧೆಡೆ ಶುಕ್ರವಾರ ರಾತ್ರಿ ಮಿಂಚು, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ.

ಗಾಳಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ತಾಲೂಕು ಕಚೇರಿ ಆವರಣದಲ್ಲಿನ ಮರಗಳು ಮುರಿದು ಬಿದ್ದಿವೆ. ಹಾಸನ ರಸ್ತೆ ಬಡಾವಣೆ, ರಾಷ್ಟ್ರೀಯ ಇಕ್ಕೆಲಗಳಲ್ಲಿ ಚರಂಡಿಗಳು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.

ರೈಲ್ವೆ ನಿಲ್ದಾಣದಲ್ಲಿ ಮೇಲು ಹೊದಿಕೆ ಹಾಕದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮಳೆಯಲ್ಲಿ ತೊಯ್ದು ಹೋಗಿದ್ದ ದೃಶ್ಯ ಕಂಡುಬಂದಿತು. ಜತೆಗೆ ಮೇಲು ಹೊದಿಕೆಯಲ್ಲಿ ನೀರು ಸುರಿದು ಮತ್ತಷ್ಟು ಅವಾಂತರ ಉಂಟು ಮಾಡಿತ್ತು. ಎರಡು ಮತ್ತು ಮೂರನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಆಲಿಕಲ್ಲು ರಾಶಿ ಸುರಿದಿದ್ದರಿಂದ ಶ್ವೇತ ವರ್ಣಕ್ಕೆ ತಿರುಗಿದ್ದು ಮಳೆ ರಭಸ ಕ್ಷಣ ಕಾಲ ಆತಂಕ ಸೃಷ್ಟಿಸಿತ್ತು.

ಮಾಲೇಕಲ್ ತಿರುಪತಿ, ಕಾಟೀಕೆರೆ, ಅಗ್ಗುಂದ, ಮುದ್ದನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಆಸುಪಾಸಿನಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಕಲ್ಪಿಸಿದೆ. ಮಾಹಿತಿ ಅನುಸಾರ ಕಸಬಾ ಹೋಬಳಿಯಲ್ಲಿ 16 ಮಿಮೀ ಮಳೆ ದಾಖಲಾಗಿದ್ದರೆ, ಬಾಣಾವರ, ಜಾವಗಲ್, ಗಂಡಸಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಕಣಕಟ್ಟೆ ಹೋಬಳಿಯಲ್ಲಿ ಮಳೆ ಪ್ರಮಾಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net