

ವಿಜಯವಾಣಿ ಸುದ್ದಿಜಾಲ ಉಡುಪಿ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೇ20ರಿಂದ 24ರ ವರೆಗೆ ಭಾರಿ ಗಾಳಿಯೊಂದಿಗೆ ಗುಡುಗು-ಸಿಡಿಲು ಸಹಿತವಾಗಿ ಮಳೆಯಾಗಲಿದ್ದು, ಆರೆಂಜ್ ಹಾಗೂ ರೆಡ್ ಅರ್ಲಟ್ ಘೋಷಿಸಲಾಗಿತ್ತು.
ಮೇ 19ರ ರಾತ್ರಿ (ಸೋಮವಾರ)ಯಿಂದಲೇ ಮಳೆ ಆರಂಭಗೊಂಡಿದ್ದು, ಮಾರನೇ ದಿನ ಮಂಗಳವಾರ ದಿನವಿಡೀ ಮಳೆ ಸುರಿಯಿತು. ಬೆಳಗ್ಗೆ 7 ಗಂಟೆಯಿಂದ 8ರ ವರಗೆ ಮಂದಗತಿಯಲ್ಲಿ ಸುರಿಯುತ್ತಿದ್ದ ಮಳೆ, ಬಳಿಕ ಒಂದೇಸಮನೆ ಭಾರಿ ಪ್ರಮಾಣದಲ್ಲಿ ಸುರಿಯಿತು. ದಟ್ಟ ಮೋಡವೂ ಆವರಿಸಿದ್ದರಿಂದ ಬೆಳಗ್ಗೆ 8:30ರ ಸಮಯದಲ್ಲಿ ಸಂಜೆ 6:30ರ ಬಳಿಕದ ವಾತಾವರಣದಂತೆ ಕಂಡುಬಂತು.
ಭಾರಿ ಮಳೆಯಿಂದಾಗಿ ವಾಹನ ಸಂಚಾರಕ್ಕೂ ತೊಡಕುಂಟಾಯಿತು. ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 8:30ರಿಂದ 10:30ರ ವರಗೆಗೆ ಲಕ್ಷ್ಮೀಂದ್ರ ನಗರದಿಂದ ಮುಂದೆ ಟ್ರಾಫಿಕ್ ಜಾಮ್ ಉಂಟಾಯಿತು. ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಲಕ್ಷ್ಮೀಂದ್ರ ನಗರದ ವರೆಗೆ ರಸ್ತೆ ಇಳಿಜಾರಿನಿಂದ ಕೂಡಿದ್ದು, ಪಕ್ಕದ ಚರಂಡಿ ಬ್ಲಾಕ್ ಆಗಿದ್ದರಿಂದ ಮಳೆ ನೀರು ನದಿಯಂತೆ ಹರಿಯುತ್ತಿತ್ತು. ಲಾರಿ, ಬಸ್ನಂತಹ ಬೃಹತ್ ವಾಹನಗಳಿಗೂ ಸಂಚರಿಸಲಾಗದಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಕಿಲೋ ಮೀಟರ್ಗಟ್ಟಲೆ ವಾಹನಗಳ ಸಾಲು ನಿಂತಿತ್ತು.
ಉದ್ಯೋಗದ ನಿಮಿತ್ತ ನಿತ್ಯವೂ ಬೆಳಗ್ಗೆ ಈ ಮಾರ್ಗದ ಮೂಲಕವೇ ಬೈಕ್ ಮೂಲಕ ತೆರಳುವ ಮಹಿಳಾ-ಪುರುಷ ನೌಕರರು ಪರದಾಡಿದರು. ರಸ್ತೆಯಲ್ಲಿ ಮುಂದೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದನ್ನು ಅರಿಯದೆ ಬೈಕ್ ಚಲಾಯಿಸಿಕೊಂಡು ಬಂದು ನೀರಿನ ಸೆಳೆತಕ್ಕೆ ಸಿಲುಕಿದರು. ಅನೇಕರ ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿ ಲಾರಿ, ಕಾರುಗಳಿಗೆ ಡಿಕ್ಕಿಯಾಗಿ ನಿಂತಿತು.
ಕಾರ್ಕಳ- 72.06 ಮಿ.ಮೀ., ಕುಂದಾಪುರ- 6.06 ಮಿ.ಮೀ., ಉಡುಪಿ- 60.05 ಮಿ.ಮೀ., ಬೈಂದೂರು- 9.07 ಮಿ.ಮೀ., ಬ್ರಹ್ಮಾವರ- 18.06 ಮಿ.ಮೀ., ಕಾಪು- 76.03 ಮಿ.ಮೀ., ಹೆಬ್ರಿ- 21.06 ಮಿ.ಮೀ. ಮಳೆಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರದ ಬೆಳಗ್ಗೆಯವರೆಗೆ ಜಿಲ್ಲೆಯಲ್ಲಿ 32.09 ಮಿ.ಮೀ. ಮಳೆಯಾಗಿದೆ.