ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಭರ್ಜರಿ ಮಳೆ ; ತುಂಬಿ ಹರಿಯುತ್ತಿವೆ ಕೆರೆ, ತೊರೆಗಳು

24 PN HALLI 3
Published on

ತುಮಕೂರು: ಜಿಲ್ಲೆಯಲ್ಲಿ ಭರ್ಜರಿ ಮಳೆ ಮುಂದುವರಿದಿದ್ದು, ಕೆರೆ, ತೊರೆಗಳೆಲ್ಲಾ ತುಂಬಿವೆ. ಶನಿವಾರ ರಾತ್ರಿ ಪೂರ್ತಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಳ್ಳಗಳಲ್ಲಿ ನೀರು ರಭಸವಾಗಿ ಹರಿಯಲಾರಂಭಿಸಿದೆ.

ಈಗಾಗಲೇ ಹೇಮಾವತಿ ನೀರು ಕೂಡ ಕೆರೆಗಳಿಗೆ ಹರಿದಿದ್ದು ಮಳೆ ನೀರೂ ಜತೆಯಾಗಿ ರೈತರ ಖುಷಿ ಇಮ್ಮಡಿಗೊಳಿಸಿದೆ, ಗುಬ್ಬಿ, ತುರುವೇಕೆರೆಯ ಕೆಲವು ಭಾಗದಲ್ಲಿ ನೀರು ಹೆಚ್ಚಾಗಿರುವುದು ತಲೆನೋವು ತಂದಿದೆ, ಶಿರಾ ತಾಲೂಕು ಮದಲೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮಲಾಪುರ ಕೆರೆಗೆ ಒಳಹರಿವು ಹೆಚ್ಚಾಗಿದೆ.

ಅಡಕೆ ತೋಟದಲ್ಲಿ ನಿಂತ ನೀರು: ಹೇಮಾವತಿ ನೀರಿಗಾಗಿ ಪರಿತಪಿಸುತಿದ್ದ ಜನರಿಗೀಗ ನೀರು ನಿಂತರೆ ಸಾಕು ಎಂಬ ಪರಿಸ್ಥಿತಿ ಎದುರಾಗಿದೆ, ಹೇಮೆ ಜತೆಗೆ ಮಳೆ ನೀರು ಸೇರಿ ಅಡಕೆ ತೋಟದಲ್ಲಿ ನಿಂತಿದ್ದು ಬೆಳೆ ಹಾಳಾಗುವ ಭಯ ಎದುರಾಗಿದೆ. ಹೌದು, ಹೇಮಾವತಿ ನೀರಿನಿಂದ ತುಂಬಿ ತುಳುಕುತ್ತಿರುವ ಗುಬ್ಬಿ ತಾಲೂಕಿನಲ್ಲಿ ಭರ್ಜರಿ ಮಳೆ ಕೂಡ ಸುರಿಯುತ್ತಿದ್ದ ಕೆರೆಗಳ ಹಿನ್ನೀರು ತೆಂಗು, ಅಡಕೆ ತೋಟಗಳಿಗೆ ನುಗ್ಗಿ, ನಿಂತಿದೆ ಹಾಗಾಗಿ, ಕೆರೆಗಳಿಗೆ ಹೇಮಾವತಿ ನೀರು ನಿಲ್ಲಿಸುವಂತೆ ರೈತರು ಗೋಗರೆಯುತ್ತಿದ್ದಾರೆ.

ಗುಬ್ಬಿ ತಾಲೂಕಿನ ಬಿದರೆ, ಇರಕಸಂದ್ರ, ಬೈಚನಹಳ್ಳಿ, ದೊಡ್ಡನೆಟ್‌ಕುಂಟೆ ಹಾಗೂ ಗುಬ್ಬಿ ಕೆರೆಗಳು ಹೇಮಾವತಿ ನೀರಿಗೆ ತುಂಬಿ ತುಳುಕಿದ್ದ ನಡುವೆಯೇ ಮಳೆ ಸುರಿಯಲಾರಂಭಿಸಿದ್ದು ತೋಟಗಳಿಗೆ ನೀರು ನುಗ್ಗಲಾರಂಭಿಸಿದೆ. ಅಡಕೆಗೆ ಉತ್ತಮ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಪೈಪೋಟಿಗೆ ಬಿದ್ದವರಂತೆ ರೈತರೆಲ್ಲಾ ಅಡಕೆ ನಾಟಿ ಮಾಡಿದ್ದು, ಗುಂಡಿಗಳಲ್ಲಿ ನೀರು ನಿಂತಿರುವುದು ಸಸಿ ಕೊಳೆಯುವ ಸಾಧ್ಯತೆಯಿದೆ. ಹಾಗಾಗಿ, ರೈತರು ತೋಟ ಉಳಿಸಿಕೊಳ್ಳಲು ನೀರು ನಿಲ್ಲಿಸಲು ಮನವಿ ಮಾಡುತ್ತಿದ್ದಾರೆ.

ಹೇಮಾವತಿ ನೀರಿನಿಂದ ತುಂಬಿರುವ ಕೆರೆಗಳಿಗೆ ಸತತವಾಗಿ ಸುರಿಯುತ್ತಿರುವ ಮಳೆ ಸೇರಿಕೊಂಡು ನೀರು ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಸಂಬಂಧಪಟ್ಟವರು ಈ ಭಾಗದಲ್ಲಿ ಪೋಲಾಗುತ್ತಿರುವ ಹೇಮಾವತಿ ನೀರು ನಿಲ್ಲಿಸಿ, ರೈತರನ್ನು ಬದುಕಿಸಬೇಕು.

ಬಸವರಾಜು ರೈತ, ಬಿದರೆ

ಹೆಚ್ಚುತ್ತಿರುವ ಮಳೆಗೆ ಕೋಡಿ ಹರಿದ ಕೆರೆ-ಕಟ್ಟೆಗಳು(ಹುಳಿಯಾರು): ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯಾದ್ಯಂತ ಶನಿವಾರ ರಾತ್ರಿ ಧಾರಕಾರ ಮಳೆಯಾಗಿದ್ದು ಕೆರೆಕಟ್ಟೆಗಳು ಕೋಡಿ ಬಿದ್ದಿವೆ. ತೋಟಗಳಲ್ಲಿ ನೀರು ನಿಂತು ರಸ್ತೆಗಳಕಲ್ಲೂ ರಭಸವಾಗಿ ನೀರು ಹರಿದಿದೆ. ದಸೂಡಿ ಸಮೀಪದ ರಾಮಪ್ಪನಕೆರೆ ಹಾಗೂ ಚಿಕ್ಕಬಿದರೆ ಸಮೀಪದ ಸಂಗೇನಹಳ್ಳಿ ಕೆರೆ ಕೋಡಿ ಬಿದ್ದಿವೆ. ಚಿಕ್ಕಬಿದರೆ ಕೆರೆ ಕೋಡಿಗೆ ಕೇವಲ ಅರ್ಧ ಅಡಿ ಬಾಕಿ ಉಳಿದಿದೆ. ಈ ಭಾಗದ ಸುವರ್ಣಮುಖಿ ನದಿಯು ಮಳೆ ಮತ್ತು ಹೇಮೆ ನೀರಿನಿಂದ ಮೈದುಂಬಿ ಹರಿಯುತ್ತಿದೆ.

ಹೆಚ್ಚುತ್ತಿರುವ ಮಳೆಯಿಂದ ಆತಂಕಕ್ಕೊಳಗಾದ ರೈತರು(ತುರುವೇಕೆರೆ): ತಾಲೂಕಿನಲ್ಲಿ ಶನಿವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಯಿಂದ ತೋಟ, ಚೆಕ್‌ಡ್ಯಾಂ, ಕೃಷಿ ಹೊಂಡ, ಕೆರೆಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಕಸಬಾ 27, ಮಾಯಸಂದ್ರ 73, ದಂಡಿನಶಿವರ 8.3, ಸಂಪಿಗೆ 11.6, ದಬ್ಬೇಘಟ್ಟದಲ್ಲಿ 20 ಮಿ.ಮೀಟರ್ ಮಳೆಯಾಗಿದೆ. ಅರಳೀಕೆರೆ-ಮಾದಿಹಳ್ಳಿ ಕೊಂಡಜ್ಜಿ ಕ್ರಾಸ್ ಸೋಪ್‌ನಹಳ್ಳಿ ಮತ್ತು ದೊಂಬರನಹಳ್ಳಿ ರಸ್ತೆ ಮೇಲಿನ ಹಳ್ಳ ರಭಸದಿಂದ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪಟ್ಟಣದ ಕೆರೆ ತುಂಬಿ ಶಿಂಷಾ ನದಿ ಸೇರುತ್ತಿದ್ದು ಕೆರೆಯ ಹಿಂಭಾಗದ ಗದ್ದೆ ಬಯಲಿಗೂ ಹೆಚ್ಚಿನ ನೀರು ನುಗ್ಗಿದೆ.

ಹಲವೆಡೆ ರಾಗಿ, ತೋಗರಿ ಉತ್ತಮವಾಗಿ ಬೆಳೆದಿದ್ದು ಹೆಚ್ಚಾದ ಮಳೆಗೆ ರಾಗಿ ತೆನೆ ನೆಲ ಕಚ್ಚಿದ್ದು ರೈತರಿಗೆ ಅಪಾರ ನಷ್ಟವಾಗಲಿದೆ ಎಂದು ಮಾದಾಪಟ್ಟಣದ ರೈತ ಬಸವರಾಜು ಆತಂಕ ವ್ಯಕ್ತಪಡಿಸಿದರು. ಇತ್ತೀಚಿಗೆ ನೆಟ್ಟಿದ್ದ ಅಡಿಕೆ, ತೆಂಗು, ಬಾಳೆ ತೋಟಗಳಲ್ಲಿ ಮಳೆ ನೀರು ನಿಂತು ಸಸಿಗಳು ಕೊಳೆಯುವಂತಾಗಿದೆ. ತಗ್ಗು ಪ್ರೇಶದಲ್ಲಿನ ತೋಟದಲ್ಲಿ ಹೆಚ್ಚು ನೀರು ನಿಂತು ತೆಂಗಿನ ಹಾಗೂ ಅಡಿಕೆ ಪಸಲು ಕೀಳಲು ಸಾಧ್ಯವಾಗದೇ ರೈತರು ಬಿದ್ದಕಾಯಿಗಳನ್ನು ನೀರಿನಲ್ಲಿಯೇ ಹಾಯ್ದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾದಾಪಟ್ಟಣದ ರೈತ ಜಯಪ್ರಕಾಶ್ ಹೇಳಿದರು.

ಮನೆಗಳಿಗೆ ನುಗ್ಗಿದ ನೀರು, ವಾಲಿದ ವಿದ್ಯುತ್ ಕಂಬಗಳು: ಶಿರಾ ತಾಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವು ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಕಳ್ಳಂಬೆಳ್ಳ ಕೆರೆಗೆ ನೀರು ತರುವ ದೊಡ್ಡ ಹಳ್ಳ ಶನಿವಾರದ ಮಳೆಯಿಂದಾಗಿ ಮೈದುಂಬಿ ಹರಿದಿದ್ದು, ದಾರಿಯುದ್ದದ ಬ್ಯಾರೇಜ್‌ಗಳು, ಪಿಕಪ್‌ಗಳಿಗೆ ಜೀವಕಳೆ ಬಂದಿದೆ, ಕಳ್ಳಂಬೆಳ್ಳ ಕೆರೆಗೆ ಭಾರಿ ನೀರು ಹರಿದುಬಂದ ಕಾರಣ, ಕೆರೆಯ ಎಲ್ಲ ಕೋಡಿಗಳೂ ತುಂಬಿ ಹರಿದಿವೆ. ಶಿರಾ ಕೆರೆಗೆ ನೀರು ತರುವ ಹಳ್ಳವೂ ಭರ್ತಿಯಾಗಿದೆ. ಚಿಕ್ಕನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಸರ್ವೀಸ್ ರಸ್ತೆಯ ಸೇತುವೆ ಮೀರಿ ನೀರು ಹರಿಯುತ್ತಿದೆ.

ಮನೆಗಳಿಗೆ ನುಗ್ಗಿದ ನೀರು: ಕೋಟೆ ಸಮೀಪದ ಕೋಡಿ ಮೀರಿ ಹರಿದ ನೀರು ಹಳ್ಳದಲ್ಲಿ ಸರಾಗವಾಗಿ ಹರಿಯಲು ಗಿಡಗಂಟೆಗಳು ಅಡ್ಡಿಯಾದ್ದರಿಂದ ಕೋಟೆ ಬಡಾವಣೆಯ ಮಾರಮ್ಮನ ದೇವಸ್ಥಾನದ ಸಮೀಪ ಹಳ್ಳದ ಅಕ್ಕಪಕ್ಕದ ಮನೆಗಳು, ಪೆಟ್ಟಿಗೆ ಅಂಗಡಿಗಳಿಗೂ ನೀರು ನುಗ್ಗಿತ್ತು. ಮತ್ತೊಂದು ಕೋಡಿಯಿಂದ ಹಳ್ಳ ಸೇರಿದ ನೀರು ಶಿರಾ ಚನ್ನನಕುಂಟೆ ಮಾರ್ಗದಲ್ಲಿ ಬರುವ ಸೇತುವೆ ಮೀರಿ ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನೀರಿನ ಹರಿವಿನಿಂದ ಹಳ್ಳದ ಸಮೀಪದ ವಿದ್ಯುತ್ ಕಂಬಗಳು ನೆಲ ಮಟ್ಟಕ್ಕೆ ವಾಲಿಕೊಂಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತ ಮಾಡಿದರು.

ಸೇತುವೆ ಕುಸಿದು ರಸ್ತೆ ಸಂಪರ್ಕ ಬಂದ್: ಕಳ್ಳಂಬೆಳ್ಳ ಹೋಬಳಿಯ ದೊಡ್ಡಶೀಬಿ, ಬಾಲಬಸವನಹಳ್ಳಿ ಕೆರೆ ಸೇರಿ ಹಲವಾರು ಕೆರೆಗಳು ಕೋಡಿ ಹರಿಯುತ್ತಿದೆ. ಇದೇ ಸಮಯದಲ್ಲಿ ಹಾವಿನಾಳು ಬಳಿಯ ದೊಡ್ಡ ಸೇತುವೆ ಹಳ್ಳದಲ್ಲಿ ಹರಿದ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಇದೇ ಮಾರ್ಗದಲ್ಲಿ ಬಂದ ಆಟೋರಿಕ್ಷಾವೊಂದು ಕುಸಿದ ಸೇತುವೆ ಬಳಿ ಸಿಲುಕಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತುಂಬಿದ ಸಂಗಮೇಶ್ವರ ಪಿಕಪ್: ನಗರಕ್ಕೆ ಸಮೀಪವಿರುವ ಎರಡು ಬೃಹತ್ ಹಳ್ಳಗಳ ಸಮಾಗಮ ಕ್ಷೇತ್ರ ಎನಿಸಿರುವ ಆದಲೂರು ಸಂಗಮೇಶ್ವರ ಪಿಕಪ್ ಶನಿವಾರದ ಮಳೆಯಿಂದ ಮೈದುಂಬಿದ್ದು, ಅದನ್ನು ನೋಡಲು ಭಾನುವಾರದಂದು ಜನಸಾಗವೇ ಹರಿದು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net