ರಾಜ್ಯದಲ್ಲಿ ವಾರಾಂತ್ಯದವರೆಗೂ ಭಾರಿ ಮಳೆ: 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Rains
Published on

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಭರ್ಜರಿ ಪ್ರವೇಶದ ಬಳಿಕ ಈ ವಾರಾಂತ್ಯದವರೆಗೂ ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ಹಾಗೂ ಗುರುವಾರ ಕರಾವಳಿ, ಮಲೆನಾಡು ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಭಾರಿ ಮಳೆಯಿಂದ ಮಲೆನಾಡು ಭಾಗದ ಜಲಾಶಯಗಳು ಮತ್ತೆ ಭರ್ತಿಯಾಗಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯತೊಡಗಿವೆ. ಕರಾವಳಿ ತೀರದಲ್ಲಿ ವೇಗದ ಗಾಳಿ ಬೀಸಲಿದ್ದು, ಸಮುದ್ರದ ತಟದಿಂದ ದೂರ ಉಳಿವಂತೆ ಸಾರ್ವಜನಿಕರಿಗೆ ಸಂದೇಶ ರವಾನಿಸಲಾಗಿದೆ.

ಈ ತಿಂಗಳ ಮಧ್ಯ ಭಾಗದಲ್ಲಿ ಮುಂಗಾರು ಅಂತ್ಯವಾಗುವ ವೇಳೆ ಹೆಚ್ಚಿನ ಜಿಲ್ಲೆಗಳು ಮಳೆ ಕೊರತೆಯನ್ನು ಎದುರಿಸಿದ್ದವು. ಅದರಲ್ಲೂ, ಕೋಲಾರ ಜಿಲ್ಲೆಯು ಅತಿ ಹೆಚ್ಚು ಕೊರತೆ ಕಂಡಿತ್ತು. ಆದರೀಗ ಒಂದೇ ವಾರದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು ಸಂಕಷ್ಟದಿಂದ ಪರಾಗಿವೆ.

ನಾಳೆಯಿಂದ ಉತ್ತರದಲ್ಲಿ ಮಳೆ:

ಹಿಂಗಾರು ಮಳೆ ಆರಂಭದ ಬಳಿಕ ಹೆಚ್ಚಿನ ಮಳೆ ಕಾಣದ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ಗುರುವಾರದಿಂದ (ಅ.23) ಉತ್ತಮ ಮಳೆಯಾಗಲಿದೆ. ಕೆಲವೆಡೆ ರಭಸದ ಮಳೆಯ ಜತೆಗೆ ವೇಗದ ಗಾಳಿಯೂ ಬೀಸಲಿದೆ. ಅ.28ರವರೆಗೂ ಹೆಚ್ಚಿನ ವರ್ಷಧಾರೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net