ರಾಜ್ಯದಲ್ಲಿ 4 ದಿನ ಜೋರು ಮಳೆ : 2 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಣೆ

rain
Published on

ಬೆಂಗಳೂರು: ರಾಜ್ಯದಲ್ಲಿ ದುರ್ಬಲವಾಗಿದ್ದ ಮುಂಗಾರು ಚುರುಕು ಪಡೆದಿದ್ದು, ಗುರುವಾರ ಕರಾವಳಿ, ಮಲೆನಾಡು ವ್ಯಾಪ್ತಿಯ ಭಾಗಗಳಲ್ಲಿ ಜೋರಾಗಿ ಮಳೆಯಾಗಿತ್ತು.

ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಕ್ಯಾಸಲ್ ರ್ಯಾಕ್​​​ 20, ಗೇರುಸೊಪ್ಪ 17, ಹೊನ್ನಾವರ ವೀಕ್ಷಣಾಲಯ 14, ಅಂಕೋಲಾ 13, ಕದ್ರಾ 12, ಕಾರವಾರ ವೀಕ್ಷಣಾಲಯ 12, ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣ 12, ಕಲಬುರಗಿಯ ಜೇವರ್ಗಿ 11, ಬೀದರ್‌ನ ಔರಾದ್ 11 ಮತ್ತು ಶಿವಮೊಗ್ಗದ ಆಗುಂಬೆ 11 ಸೆಂಮೀ ಮಳೆಯಾಯಿತು.

ಉಡುಪಿ, ದಕ್ಷಿಣ ಕನ್ನಡದಲ್ಲಿ ಆ.29ರಂದು ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 21 ಸೆಂಮೀವರೆಗೆ ಮಳೆ ಸುರಿಯುವ ಸಂಭವ ಇದೆ. ಅಲ್ಲದೆ, ಈ ಮೇಲಿನ ಜಿಲ್ಲೆಗಳಲ್ಲಿ ಆ.30ರಿಂದ ಆ.31ರವರೆಗೆ ಆರೆಂಜ್ ಅಲರ್ಟ್ ಇರಲಿದೆ. ಉತ್ತರ ಕನ್ನಡದಲ್ಲಿ ಮುಂದಿನ 3 ದಿನ, ಬೆಳಗಾವಿ, ಬೀದರ್, ಕಲಬುರಗಿ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಆ.29ರಂದು ಬಿರುಸಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

ಗದಗ, ವಿಜಯಪುರ, ಯಾದಗಿರಿ, ಹಾಸನದಲ್ಲಿ ಆ.28ರಂದು ಮತ್ತು ಧಾರವಾಡ, ಹಾವೇರಿಯಲ್ಲಿ ಆ.30ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಂ.ಗ್ರಾಮಾಂತರ, ಬೆಂ. ದಕ್ಷಿಣ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ದಾವಣಗೆರೆಯಲ್ಲಿ ಮುಂದಿನ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಸಾಧಾರಣ ಮಳೆಯಾಗಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26.5 ಮತ್ತು 20.5 ಡಿ.ಸೆ. ದಾಖಲಾಗಬಹುದು.

ಕರಾವಳಿಯಲ್ಲಿ ಅಧಿಕ ಮಳೆ: ಆ.22ರಿಂದ ಆ.28ರವರೆಗೆ ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದಿದೆ. ವಾಡಿಕೆಯಂತೆ 133 ಮಿಮೀ ಮಳೆಯಾಗಬೇಕಿತ್ತು. ಆದರೆ, 170 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.28ಗಿಂತ ಅಧಿಕವಾಗಿ ಮಳೆಯಾಗಿದೆ. ದಕ್ಷಿಣ ಕನ್ನಡ 135, ಉಡುಪಿ 203, ಉತ್ತರ ಕನ್ನಡ 175, ಶಿವಮೊಗ್ಗ 81, ಕೊಡಗು 59, ಚಿಕ್ಕಮಗಳೂರು 34 ಮತ್ತು ಹಾಸನದಲ್ಲಿ 15 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net