

ಬೆಂಗಳೂರು: ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಮುಂದಿನ 5 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕಲಬುರಗಿಯ ಚಿಂಚೋಳಿ, ಆಳಂದ, ರಾಯಚೂರಿನ ಬಳಗಾನೂರು, ಮಾನ್ವಿ, ಬೆಳಗಾವಿಯ ಚಿಕ್ಕೋಡಿ, ಬೈಲಹೊಂಗಲ, ಬಾಗಲಕೋಟೆಯ ಲೋಕಾಪುರ ಹಾಗೂ ಯಾದಗಿರಿಯ ವಿವಿಧ ಭಾಗಗಳಲ್ಲಿ ಶನಿವಾರ ಜೋರಾಗಿ ಮಳೆಯಾಗಿತ್ತು.
ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್‌ನಲ್ಲಿ ಸೆ.28ರಿಂದ ಸೆ.29ರವರೆಗೆ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ 115 ಮಿಮೀನಿಂದ 204 ಮಿಮೀವರೆಗೆ ವರ್ಷಧಾರೆಯಾಗುವ ಸಂಭವ ಇದೆ. ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ರಾಯಚೂರಿನಲ್ಲಿ ಮುಂದಿನ 2 ದಿನ, ಬಳ್ಳಾರಿ, ವಿಜಯನಗರ, ಗದಗದಲ್ಲಿ ಸೆ.28ರಂದು ಯೆಲ್ಲೋ ಅಲರ್ಟ್ ಇರಲಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆಯಲ್ಲಿ ಮುಂದಿನ 5 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಇಲಾಖೆ, ಮೀನುಗಾರರಿಗೆ ಸೂಚಿಸಿದೆ.
ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಹಗುರವಾಗಿ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 20 ಡಿ.ಸೆ. ಇರಲಿದೆ.