

ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಸೋಮವಾರ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ಮೈಸೂರು ನಗರದಲ್ಲೂ ಸೋಮವಾರ ಸಂಜೆ ಜಿಟಿ ಜಿಟಿ ಸೋನೆ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಸಂಜೆ 6 ಗಂಟೆಗೆ ವೇಳೆಗೆ ಸ್ವಲ್ಪ ಸೋನೆಯೊಂದಿಗೆ ಆರಂಭವಾದ ಮಳೆ ನಂತರ ಕೊಂಚ ಜೋರಾಯಿತು. ಕೊಂಚ ಕಾಲದ ಬಿಡುವಿನ ನಂತರ ಶುರುವಾದ ಜಿಟಿಜಿಟಿ ಮಳೆ ಆಗೊಮ್ಮೆ, ಈಗೊಮ್ಮೆ ಜೋರಾಗಿ ಸುರಿಯಿತು. ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸಾಕಷ್ಟು ಜನ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ನಂತರ ತೆರಳಿದರು.
ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಮಳೆಯಿಂದ ಮೈಸೂರು ಮಲೆನಾಡಿನಂತೆ ಗೋಚರವಾಯಿತು. ತಾಪಮಾನ ಕಡಿಮೆಯಾಗಿ ಹಿತಕರವಾದ ತಂಪುಗಾಳಿ ಬೀಸಿತು.