

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ಮಳೆಯ ಆರ್ಭಟ ಸೋಮವಾರದವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಶುಕ್ರವಾರ ಸಂಜೆಯವರೆಗೆ ಮಳೆಯ ವಾತಾವರಣ ಕಂಡು ಬರಲಿಲ್ಲ. ಆದರೆ, ರಾತ್ರಿ ದಿಢೀರಾಗಿ ಧಾರಾಕಾರವಾಗಿ ಮಳೆ ಸುರಿಯಲು ಪ್ರಾರಂಭಿಸಿತು. ರಾತ್ರಿ 10ರ ನಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಜನಜೀವನದ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಧಾರಾಕಾರ ಮಳೆಯಿಂದ ನಗರದ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ರಸ್ತೆಗಳು ನದಿಗಳ ರೂಪದಲ್ಲಿ ಗೋಚರಿಸುತಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರ ಸಮಸ್ಯೆ ಎದುರಾಯಿತು. ನಗರದ ಜೆಕೆ ಮೈದಾನ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮುಂಭಾಗದ ಗರಿಕೆ ಮಾಳದಲ್ಲಿ ನೀರು ನಿಂತಿದೆ. ಗಾಳಿಯ ತೀವ್ರತೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಯಾವುದೇ ಹಾನಿ ಉಂಟಾಗಲಿಲ್ಲ.
ಯೆಲ್ಲೊ ಅಲರ್ಟ್ ಘೋಷಣೆ:
ಜಿಲ್ಲೆಯಲ್ಲಿ ಸೋಮವಾರದವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಸೋಮವಾರದಿಂದ ಮಳೆಯ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 75 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಅ.1 ರಿಂದ 14ರವರೆಗೆ ಉತ್ತಮ ಮಳೆಯಾಗಿದ್ದು, ಈ ಅವಧಿಯಲ್ಲಿ 63.9 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, 105.5 ಮಿ.ಮೀ. ಮಳೆಯಾಗಿದ್ದು, ಶೇ.65 ರಷ್ಟು ಹೆಚ್ಚು ಮಳೆ ಸುರಿದಿದೆ.