

ಬೆಂಗಳೂರು: ಹಿಂಗಾರು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೂಯ್ಲುಗೆ ಬಂದಿರುವ ಭತ್ತ, ಮಕ್ಕೆಜೋಳ ಸೇರಿ ವಿವಿಧ ವಾಣಿಜ್ಯ ಬೆಳೆಗಳಿಗೆ ಹಾನಿಯಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
3 ವರ್ಷದ ಬಳಿಕ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದ ಪರಿಣಾಮ ಈ ಬಾರಿ ರಾಜ್ಯಾದ್ಯಂತ 70 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಲಾಗಿತ್ತು. 10.28 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಗೋಧಿ ಸೇರಿ ಏಕದಳ ಧಾನ್ಯ ಬಿತ್ತನೆ ಮಾಡಿದರೆ, 11.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಮುಟಕಿ ಸೇರಿ ದ್ವಿದಳ ಧಾನ್ಯ, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾ ಅವರೆ, ಕುಸುಬೆ, ಅಗಸೆ ಸೇರಿ ಇತರೆ ಎಣ್ಣೆಕಾಳು ಬಿತ್ತನೆ ಮಾಡಲಾಗಿತ್ತು. 8.57 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಹತ್ತಿ, ಕಬ್ಬು, ತಂಬಾಕು ಸೇರಿ ಇತರೆ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ.
ಕಳೆದ ವಾರ ಫೆಂಗಲ್ ಸೈಕ್ಲೋನ್ ಮತ್ತು ಈಗ ವಾಯುಭಾರ ಕುಸಿತದಿಂದ ಅಕಾಲಿಕ ಮಳೆಯಿಂದಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ, ಕೊಡಗು, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಕೂಯ್ಲುಗೆ ಬಂದಿರುವ ಭತ್ತ, ರಾಗಿ ಮತ್ತು ಮೆಕ್ಕಜೋಳ ಸೇರಿ ವಿವಿಧ ಬೆಳಗೆಗಳಿಗೆ ಹಾನಿಯಾಗಿದೆ. ಅಲ್ಲದೆ, ಅಳಿದುಳಿದ ಫಸಲು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಕಳೆದ ವಾರ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಯಿತು. ಇದರಿಂದಾಗಿ ಏಕದಳ, ದ್ವಿದಳ ಧಾನ್ಯ ಸೇರಿ ವಾಣಿಜ್ಯ ಬೆಳೆಗಳ ಉತ್ಪಾದನೆಗೆ ಕುಂಠಿತವಾಗಿದೆ.
18ರಿಂದ ಮತ್ತೆ ಮಳೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 2 ದಿನ ಮುಂದುವರಿಯಲಿದೆ. ಡಿ.15ರಿಂದ ಡಿ.17ರವರೆಗೆ ಒಣಹವೆ ಇರಲಿದ್ದು, ಡಿ.18ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರ, ಬೆಂ,ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ತುಮಕೂರಿನಲ್ಲಿ ಡಿ.13 ಮತ್ತು ಡಿ.18ರಂದು ಬಿರುಸಾಗಿ ವರ್ಷಧಾರೆಯಾಗುವ ಸಾಧ್ಯತೆ ಇರುವುದರಿಂದ ಇಲಾಖೆ ಯೆಲ್ಲೋ ಅರ್ಲಟ್ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 48 ಗಂಟೆ ಸಾಧಾರಣ ವರ್ಷಧಾರೆಯಾಗಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಡಿ.17ರವರೆಗೆ ಒಣಹವೆ ಮುಂದುವರಿಯಲಿದೆ.