

ಬೆಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಂಗಳವಾರ ವ್ಯಾಪಕ ಮಳೆಯಾಗಿದ್ದು, ಬುಧವಾರವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ಮಳೆನಾಡು ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದೆ. ಈಗಾಗಲೇ ಜಲಾಶಯಗಳು ತುಂಬಿರುವ ಕಾರಣ ಹೆಚ್ಚಿನ ಮಳೆನೀರು ನದಿ ಸೇರುತ್ತಿದೆ. ಇದರ ಪರಿಣಾಮ ಸಣ್ಣ ಪ್ರಮಾಣದ ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಿ, ಸ್ಥಳೀಯರ ಓಡಾಟಕ್ಕೆ ಅಡ್ಡಿಯಾಗಿದೆ.
ಮುಂಗಾರು ಬಿತ್ತನೆ ತಡವಾಗಿರುವ ಜಿಲ್ಲೆಗಳಲ್ಲಿ ಜೋರು ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತು ತುಸು ಸಮಸ್ಯೆ ಸೃಷ್ಟಿಸಿದೆ. ಕಳೆದ ತಿಂಗಳು ಭಾರಿ ವರ್ಷಧಾರೆಯಿಂದ ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿರುವ ಕಡೆ ಮತ್ತೆ ಮಳೆಯಿಂದ ಸಮಸ್ಯೆ ಉಂಟಾಗಿದೆ ಎಂದು ರೈತರು ದೂರಿದ್ದಾರೆ.
ನಾಳೆಯಿಂದ ಮಳೆ ಕ್ಷೀಣ:
ಕಳೆದ ಕೆಲ ದಿನಗಳಿಂದ ವಿವಿಧೆಡೆ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿಯಲಿದೆ. ಆದರೆ, ಒಳನಾಡು ಪ್ರದೇಶಗಳಲ್ಲಿ ಗುರುವಾರದಿಂದ ವರ್ಷಧಾರೆ ಕಡಿಮೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ 3-4 ದಿನ ಹೆಚ್ಚು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.