

ಅರಕಲಗೂಡು: ತಾಲೂಕಿನಲ್ಲಿ ಗುರುವಾರ ಜಿಟಿ ಜಿಟಿ ಸೋನೆ ಮಳೆ ಸುರಿಯಿತು. ಕಳೆದೆರಡು ದಿನಗಳಿಂದ ಆಗಾಗ್ಗೆ ಬಿಟ್ಟು ಬಿಟ್ಟು ಬೀಳುತ್ತಿದ್ದ ತುಂತುರು ಮಳೆ ಬಿರುಸು ಪಡೆದುಕೊಂಡಿತು. ದಿನವಿಡೀ ಸುರಿದ ಮಳೆಯನ್ನು ಲೆಕ್ಕಿಸದೆ ರೈತಾಪಿ ವರ್ಗದ ಜನರು ಕೃಷಿ ಕಾಯಕದಲ್ಲಿ ತೊಡಗಿದ್ದು ಕಂಡುಬಂತು.
ಮಳೆಯಿಲ್ಲದ ಕಾರಣ ನೀರಾವರಿ ಸೌಲಭ್ಯ ಹೊಂದಿರುವ ಕೆಲವು ರೈತರು ಪಂಪ್‌ಸೆಟ್ ಅಳವಡಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದರು. ಇದೀಗ ಬಿದ್ದ ಮಳೆಯಿಂದಾಗಿ ಒಣಗುತ್ತಿದ್ದ ತಂಬಾಕು, ಶುಂಠಿ, ಆಲೂಗಡ್ಡೆ, ಜೋಳ ಮತ್ತಿತರ ಬೆಳೆಗಳು ಮೈದುಂಬಿ ಬೆಳವಣಿಗೆಗೆ ಅನುಕೂಲಕರವಾಗಿದೆ ಎನ್ನುತ್ತಾರೆ ರೈತರು.