ಸೆ.11ರಂದು ಬೆಂಗಳೂರು ನಗರ ಸೇರಿ 12 ಜಿಲ್ಲೆಗಳಲ್ಲಿ ಮಳೆ ಬಿರುಸು: ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್​​ ಘೋಷಣೆ

rain
Published on

ಬೆಂಗಳೂರು:ರಾಜ್ಯದ 12 ಜಿಲ್ಲೆಗಳಲ್ಲಿ ಸೆ.11ರಂದು ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರದಲ್ಲಿ ಸೆ.11ರಂದು ಬಿರುಸಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರದಲ್ಲಿ ಮುಂದಿನ 5 ದಿನ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

30ಕ್ಕೆ ಮಾನ್ಸೂನ್ ಕೊನೆ: ವಾಡಿಕೆಗಿಂತ ಮುನ್ನ ರಾಜ್ಯಕ್ಕೆ ಪ್ರವೇಶಿಸಿದ್ದ ಮಾನ್ಸೂನ್, ಸೆ.30ಕ್ಕೆ ಮುಗಿಯಲಿದೆ. ರಾಜ್ಯಾದ್ಯಂತ ಈವರೆಗೆ ವಾಡಿಕೆಯಷ್ಟೇ ಮಳೆ ಸುರಿದಿದೆ.ಆದರೂ, 23 ತಾಲೂಕಿನಲ್ಲಿ ಮಳೆ ಅಭಾವ ಉಂಟಾಗಿದೆ. ಜೂ.1ರಿಂದ ಸೆ.7ರವರೆಗೆ ಕರಾವಳಿ ಜಿಲ್ಲೆಗಳಲ್ಲಿ 3,000 ಮಿಮೀ, ಮಲೆನಾಡು ಭಾಗದಲ್ಲಿ 1,357 ಮಿಮೀ, ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ 416 ಮಿಮೀ ಹಾಗೂ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ 271 ಮಿಮೀ ಮಳೆ ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.

ರಾಜ್ಯದಲ್ಲಿ ಮುಂದಿನ 7 ದಿನವರೆಗೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ 12 ಜಿಲ್ಲೆಗಳಲ್ಲಿ ಸೆ.11ರಂದು ಮಾತ್ರ ಜೋರು ಮಳೆಯಾಗಲಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲಿನ ವಾತಾವರಣ ಕಾಣಿಸಿಕೊಳ್ಳುತ್ತಿದೆ.

| ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net