

ಬೆಂಗಳೂರು: ( Weather Report ) ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಣ್ಣ ಪ್ರಮಾಣದ ಮಳೆಯಾಗುತ್ತಿದೆ. ಕರ್ನಾಟಕದ ವಿವಿಧೆಡೆ ಇಂದಿನಿಂದ ಮತ್ತೆ ಮಳೆ ಶುರುವಾಗಿದೆ, ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿಯಿಂದಲೇ ತುಂತುರು ಮಳೆ ಇತ್ತು. ಹೀಗಾಗಿ ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಎರಡು ದಿನ ರಾಜ್ಯದ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇಂದು ಮತ್ತು ನಾಳೆ ಮಳೆಯ ಮುನ್ಸೂಚನೆ ಇದೆ. ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.