ರಭಸದ ಮಳೆಗೆ ಜನಜೀವನ ಅಸ್ತವ್ಯಸ್ತ

Screenshot_2024-05-11-19-40-05-11.jpg
Published on

ಬೆಳಗಾವಿ: ನಗರದಲ್ಲಿ ಶನಿವಾರ ಗುಡುಗು-ಮಿಂಚು, ಗಾಳಿ ಸಹಿತ ಸುರಿದ ರಭಸದ ಮಳೆಗೆ ಕೆಲಹೊತ್ತು ಜನಜೀವನ ಅಸ್ತವ್ಯಸ್ತವಾಯಿತು. ಭಾರಿ ಮಳೆಗೆ ಗಟಾರಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ನಗರದ ಹಲವೆಡೆಗಳಲ್ಲಿ ರಸ್ತೆ ಮೇಲೆ ನೀರು ಸಂಗ್ರಹಗೊಂಡಿದ್ದರಿಂದ ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಯಿತು.
 ಮಧ್ಯಾಹ್ನ 3.30ರ ವೇಳೆ ಕೊಂಚ ಸುರಿದ ಮಳೆಯು ಕೆಲ ಹೊತ್ತು ಬಿಡುವು ನೀಡಿ, ಮತ್ತೆ 4.30ರಿಂದ 5.30ರವರೆಗೆ ಗುಡುಗು, ಮಿಂಚಿನೊಂದಿಗೆ ಜೋರಾಗಿ ಸುರಿಯಿತು. ಮಳೆಯ ಆರ್ಭಟ, ಗುಡುಗಿಗೆ ಜನರು ಭೀತಿಗೊಳಗಾಗಿದ್ದರು. ರಸ್ತೆಗಳ ಮೇಲೆ ಕೆಲಹೊತ್ತು ನೀರು ಹರಿಯಿತು. ನಗರದ ಪಾಂಗುಳಗಲ್ಲಿ, ಬೆಂಡಿ ಬಜಾರ್, ಮೆಣಸಿಗಲ್ಲಿಯಲ್ಲಿ ಅಂಗಡಿ, ಮನೆಗಳಿಗೆ ನೀರು ನುಗ್ಗಿತು. ಇಲ್ಲಿಯ ರಸ್ತೆಗಳ ಮೇಲೆ ಚರಂಡಿ ನೀರೂ ಹರಿದಿದ್ದರಿಂದ ಸ್ಥಳೀಯರಿಗೆ ತೊಂದರೆಯುಂಟಾಯಿತು.
 ಭಾರಿ ಮಳೆಯಿಂದಾಗಿ ಬೆಳಗಾವಿ ನಗರದ ರಸ್ತೆಗಳು ನೀರಿನಿಂದ ಆವೃತವಾದವು. ವಾಹನ ಸಂಚಾರ, ಜನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಕಲ್ಮಠ ರಸ್ತೆ, ರವಿವಾರ ಪೇಟೆ, ಗಣಪತಿ ಗಲ್ಲಿ, ಹಣ್ಣಿನ ಮಾರುಕಟ್ಟೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಯಿತು. ಬೀದಿಬದಿ ತರಕಾರಿ ವ್ಯಾಪಾರಸ್ಥರು ಮಳೆಗೆ ತೊಂದರೆ ಅನುಭವಿಸಿದರು. ಹಳೇ ಪಿ.ಬಿ. ರಸ್ತೆಯ ಜೀಜಾಮಾತಾ ವೃತ್ತದ ಬಳಿ ದೊಡ್ಡ ನಾಲಾಗಳು ತುಂಬಿ ಹರಿದಿದ್ದರಿಂದ ರಸ್ತೆಯ ಮೇಲೆ ಕಸ ಸಂಗ್ರಹಗೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿತು. ನ್ಯೂ ಗಾಂಧಿನಗರ ಬ್ರಿಡ್ಜ್, ಯಡಿಯೂರಪ್ಪ ಮಾರ್ಗದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸವಾರರು ಗಂಟೆಗೂ ಹೆಚ್ಚು ಕಾಲ ಪರದಾಡಿದರು. ಛತ್ರ ಶಿವಾಜಿ ಮಹಾರಾಜ ಜಯಂತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಮೆರವಣಿಗೆಗೂ ಮಳೆಯಿಂದ ಅಡಚಣೆ ಉಂಟಾಯಿತು.
 ರೈತರು ಹರ್ಷ:
 ಇನ್ನು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಕುಂದಾನಗರಿ ಜನರಿಗೆ ಶನಿವಾರ ಸುರಿದ ರಭಸ ಮಳೆಯು ಮಳೆ ತಂಪು ನೀಡಿತು. ನಗರವು ಸೇರಿ ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದ್ದರಿಂದ ರೈತರು ಹರ್ಷ ವ್ಯಕ್ತಪಡಿಸಿದು. ಕಳೆದ ವರ್ಷ ಮಳೆಯಾಗದೆ ರೈತರು ಸಂಕಷ್ಟ ಎದುರಿಸಿದ್ದರು. ಈ ವರ್ಷ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಶನಿವಾರ ಸುರಿದ ಮಳೆಯು ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net