

ಕುಮಟಾ: ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅತಿವೃಷ್ಟಿಯ ಹೊಡೆತಕ್ಕೆ ತೋಟಿಗರು ವ್ಯಾಪಕವಾಗಿ ಹಾನಿ ಅನುಭವಿಸಿದ್ದು ತೋಟದ ಪ್ರಮುಖ ಬೆಳೆಗಳಾದ ಅಡಕೆ ತೆಂಗು, ಬಾಳೆಯ ಜತೆಗೆ ಉಪಬೆಳೆಗಳೂ ತೀವ್ರವಾಗಿ ಹಾನಿಯಾಗಿರುವುದಾಗಿ ರೈತರು ತಿಳಿಸಿದ್ದಾರೆ.
ಬಹುತೇಕ ಎಲ್ಲೆಡೆ ಮಳೆಯಿಂದಾಗಿ ತೋಟದಲ್ಲಿ ಹತ್ತಾರು ದಿನ ನೀರು ನಿಂತು ಸಮಸ್ಯೆಯಾಗಿದೆ. ತಗ್ಗು ಪ್ರದೇಶದ ಭತ್ತದ ಗದ್ದೆಗಳಿಗೂ ಇದೇ ಸಮಸ್ಯೆ. ಹಲವೆಡೆ ರೈತರು ಔಷಧ ಸಿಂಪಡಣೆ ಮಾಡಿದ್ದರೆ, ಕೆಲವೆಡೆ ಸಿಂಪಡಣೆಗೆ ಅವಕಾಶವನ್ನೇ ಮಳೆ ಕೊಟ್ಟಿಲ್ಲ. ತೋಟ-ಗದ್ದೆಗೆ ಸುರಿದ ಗೊಬ್ಬರ ಕೊಚ್ಚಿ ಹೋಗಿದೆ. ಕಳೆ ತೆಗೆಯಲು ಸಾಧ್ಯವಾಗಿಲ್ಲ. ತೋಟದಲ್ಲಿ ನೀರು ನಿಂತಿದ್ದರಿಂದ ಕೊಳೆ ರೋಗದಿಂದಾಗಿ ಉದುರಿದ ಅಡಕೆ ಮಿಳ್ಳೆಗಳನ್ನು ಹೆಕ್ಕುವುದಕ್ಕೂ ಅಸಾಧ್ಯವಾಗಿತ್ತು. ಗಾಳಿಗೆ ಅಡಕೆ-ತೆಂಗಿನ ಮರಗಳು ಮಾತ್ರವಲ್ಲದೇ ತೋಟದಂಚಿನ ಅರಣ್ಯ ಮರಗಳು ಕೂಡಾ ಬಿದ್ದು ತೋಟಕ್ಕೆ ನಷ್ಟವನ್ನುಂಟು ಮಾಡಿದ ಪ್ರಕರಣಗಳು ಹಲವಿದೆ. ಪ್ರಮುಖವಾಗಿ ತೋಟಕ್ಕೆ ಸಾಕಷ್ಟು ಸವಕಳಿಯಾಗಿದ್ದು ಸದ್ಯ ಆಗಿರುವ ಮತ್ತು ಮುಂದೆ ಆಗಲಿರುವ ಬೆಳೆ ನಷ್ಟವನ್ನು ಅಂದಾಜಿಸಬೇಕಾಗಿದೆ.
ಲಭ್ಯ ಮಾಹಿತಿ ಪ್ರಕಾರ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಬೆಳ್ಳಂಗಿಯ ಶ್ರೀಧರ ರಾಮ ಹೆಗಡೆ ಅವರ ೩ ಎಕರೆಗೂ ಹೆಚ್ಚು ಅಡಕೆ-ತೆಂಗು ಕೃಷಿ ಪ್ರದೇಶದಲ್ಲಿ ಕೊಳೆ ಸಹಿತ ಹಲವು ಬಗೆಯಲ್ಲಿ ಬೆಳೆಹಾನಿಯಾಗಿದೆ. ದೀವಳ್ಳಿಯ ಕೃಷ್ಣ ವಿಷ್ಣು ಹೆಗಡೆ ಮತ್ತು ಸತ್ಯನಾರಾಯಣ ವಿಷ್ಣು ಹೆಗಡೆ ಅವರ ತೋಟದಲ್ಲಿ ಮೇ ತಿಂಗಳಿಂದ ಈವರೆಗೆ 220 ಕ್ಕೂ ಹೆಚ್ಚು ಅಡಕೆ ಮರಗಳು ಬಿದ್ದಿವೆ ಎಂದು ತಿಳಿಸಿದ್ದಾರೆ. ನಾಗೂರಿನ ನಾಗರಾಜ ಭಟ್, ಕಬಗಾಲದ ಗಜಾನನ ಭಟ್ ಹಾಗೂ ಆಸುಪಾಸಿನ 8 ಕ್ಕೂ ಹೆಚ್ಚು ಜನರ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ. ಹೀಗೆ ಅಘನಾಶಿನಿ, ಚಂಡಿಕಾ, ಬಡಗಣಿ, ಕಬಗಾಲ ಮುಂತಾದ ಹೊಳೆ-ಹಳ್ಳಗಳ ವ್ಯಾಪ್ತಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯ ನೇರ ಪರಿಣಾಮದ ಉದಾಹರಣೆಗಳು ನೂರಾರು ಇದೆ.
ಹೊಳೆಗದ್ದೆಯಲ್ಲಿ ವಿ.ಜಿ.ಹೆಗಡೆ. ಹಾಸ್ಯಗಾರ ಎಂಬ ಪ್ರಗತಿಪರ ಕೃಷಿಕರು ಕೂಡಾ ಅತಿವೃಷ್ಟಿ ಹೊಡೆತಕ್ಕೆ ತತ್ತರಿಸಿದ್ದಾರೆ. ಅವರ 2 ಎಕರೆ ಅಡಕೆ ತೋಟ 10 ದಿನ ನೀರಿನಲ್ಲಿ ಮುಳುಗಿತ್ತು. ತೋಟದಲ್ಲಿದ್ದ ಜಾಯಿಕಾಯಿ ಕೊಳೆತು ನಾಶವಾಗಿದೆ. ೩ ಎಕರೆ ಗದ್ದೆಯಂತೂ ಜೂನ್ 27 ರಿಂದ ನಿರಂತರವಾಗಿ ನೀರಿನಲ್ಲಿ ಮುಳುಗಡೆ ಆಗಿದೆ. ಇಳಿಯುವ ಲಕ್ಷಣ ಇನ್ನೂ ಇಲ್ಲ. ಗದ್ದೆಯಲ್ಲಿ ಸ್ಥಳೀಯ ಹಳಗಾ ತಳಿಯ ಜತೆಗೆ, ಆರ್ ಎನ್ ಆರ್ ೧೫೦೪೮(ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಹೆಸರುವಾಸಿ ತಳಿ), ರಾಜಮುಡಿ ಮೊದಲಾದ ತಳಿಗಳನ್ನು ಹಾಕಿದ್ದರು. ಕೆಲವು ಆರಂಭದಲ್ಲೇ ನಾಶವಾದರೆ, ಉಳಿದವು ಕೊನೆಯುಸಿರೆಳೆಯುತ್ತಿವೆ. ನಮಗೆ ಬೇಸಿಗೆಯಲ್ಲಿ ಉಪ್ಪು ನೀರಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಎನ್ನುತ್ತಾರೆ. ಈಗಾಗಲೇ ಅಡಕೆ ಸೊಸೈಟಿಯಿಂದ ರೈತರ ತೋಟ-ಗದ್ದೆ ಹಾನಿಗೆ ವಿಶೇಷ ಪರಿಹಾರ ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಅತಿವೃಷ್ಟಿಯಿಂದಾಗಿ ಎಷ್ಟೋ ರೈತರಿಗೆ ಪರಿಹಾರಕ್ಕೆ ಅರ್ಜಿಸಲ್ಲಿಸಲೂ ಬರಲಾಗದ ಸ್ಥಿತಿ ಇದೆ.
ತಾಲೂಕಿನ ಯಾಣ, ಬೆಳ್ಳಂಗಿ, ಬಡಾಳ, ಕಾಗಾಲ ಮುಂತಾದ ಹಲವು ಕಡೆಗಳಲ್ಲಿ ತೋಟದ ಹಾನಿ ಕಂಡುಬಂದಿದೆ. ಗಾಳಿಗೆ ಮರ ಮುರಿದ ಪ್ರಕರಣಗಳೂ ಗಮನಕ್ಕೆ ಬಂದಿದೆ. ಕೊಳೆ ರೋಗವೂ ಅಲ್ಲಲ್ಲಿ ಹೆಚ್ಚುತ್ತಿದೆ. ರೈತರು ವಿಮೆ ಮಾಡಿಸಿದ್ದರೆ ಉತ್ತಮ ಪರಿಹಾರವೂ ಸಿಗುತ್ತದೆ. ಉಳಿದಂತೆ ಪ್ರಕೃತಿ ವಿಕೋಪದಡಿ ಪರಿಹಾರಕ್ಕೆ ಪರಿಶೀಲನೆ ನಡೆದಿದೆ. ಚೇತನ ನಾಯ್ಕ, ತೋಟಗಾರಿಕೆ ಸಹಾಯಕ ನಿರ್ದೇಶಕ, ಕುಮಟಾ