

ಸಂಡೂರು: ಭಾರಿ ಮಳೆಗೆ ತಾಲೂಕಿನ ನಾರಿಹಳ್ಳದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಎಲ್ಲ ಕ್ರಸ್ಟ್‌ಗೇಟ್ ತೆರೆದು ಹೊರಗೆ ಹರಿಸಲಾಯಿತು.
12 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಟ್ಟಿದ್ದರಿಂದ ನಾಗಲಾಪುರ, ತಾಳೂರು, ವಡ್ಡು, ಬಸಾಪುರ. ಕುರೇಕುಪ್ಪ ಸೇರಿ ವಿವಿಧೆಡೆ ಮನೆ, ಜಮೀನುಗಳಿಗೆ ಹರಿದು ಅಪಾರ ನಷ್ಟವಾಗಿದೆ. ನಂದಿಹಳ್ಳಿ ಚೆಕ್‌ಪೋಸ್ಟ್ ಬಳಿ ವಾಷಿಂಗ್ ಪ್ಲಾಂಟ್‌ಗೆ ನೀರು ನುಗಿದ್ದರಿಂದ ಪ್ಲಾಂಟ್‌ನಲ್ಲಿದ್ದ ನೂರಾರು ಮೈನ್ಸ್ ಲಾರಿಗಳಲ್ಲಿ ನೀರು ತುಂಬಿಕೊಂಡು ಲಾರಿ ಚಾಲಕರು ರಾತ್ರಿಯಿಡೀ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಶನಿವಾರ ಬೆಳಗಿನ ಜಾವ ಮಳೆ ತಗ್ಗಿದ ನಂತರ, ಪ್ಲಾಂಟ್‌ನಿಂದ ನೀರು ಹೊರ ಹರಿದಂತೆ ಲಾರಿಗಳನ್ನು ಹೊರ ತರಲಾಯಿತು. ಕೆಲ ಲಾರಿಗಳು ಮಳೆಯ ರಭಸಕ್ಕೆ ಮಣ್ಣಿನಲ್ಲಿ ಹೂತು ಹೋಗಿದ್ದವು. ಸ್ವಾಮಿಮಲೆ, ದೋಣಿಮಲೆ ಹಾಗೂ ಕುಮಾರಸ್ವಾಮಿ ಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ. ಸಂಡೂರು 151.8, ಚೋರನೂರು 84.2, ಕುರೇಕುಪ್ಪ 63, ವಿಠಲಾಪುರ ಭಾಗದಲ್ಲಿ 58.2 ಮಿಮೀ ಮಳೆಯಾಗಿದೆ.