ರಾಜ್ಯದಲ್ಲಿ ಮತ್ತೆ ಬಿರುಸು ಪಡೆದ ಮಳೆ

monsoon rains
Published on

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಗುರುವಾರದಿಂದ ಎಲ್ಲ 31 ಜಿಲ್ಲೆಗಳಲ್ಲೂ ಮಳೆ ಆವರಿಸಿಕೊಳ್ಳಲಿದೆ. ಪುನರ್ವಸು ಮಳೆಯು ಬಿರುಸುಗೊಳ್ಳುವ ಮುನ್ಸೂಚನೆ ದೊರೆತಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇನ್ನಷ್ಟು ವರ್ಷಧಾರೆ ಸುರಿಸಲಿದೆ.

ಕಳೆದೆರಡು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ತುಸು ಕಡಿಮೆಯಾಗಿದ್ದ ಮಳೆ ಅಬ್ಬರ ಮತ್ತೆ ಅಬ್ಬರಿಸುವ ಕುರುಹು ನೀಡಿದೆ. ಕರಾವಳಿಯ ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಗುರುವಾರ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶುಕ್ರವಾರದಿಂದ ಮೂರು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಇದೇ ಅವಧಿಯಲ್ಲಿ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಒಳನಾಡಿನಲ್ಲಿ ವರ್ಷವೈಭವ ಸಾಧ್ಯತೆ:

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವುದುಂಟು. ದಕ್ಷಿಣ ಒಳನಾಡು ವ್ಯಾಪ್ತಿಗೆ ಒಳಪಟ್ಟಿರುವ ಮಲೆನಾಡಿನ 4 ಜಿಲ್ಲೆಗಳಲ್ಲಿ ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೀಗ ಸದ್ಯದ ಹವಾಮಾನ ಮುನ್ಸೂಚನೆಯಂತೆ ಶುಕ್ರವಾರದಿಂದ ವ್ಯಾಪಕ ವರ್ಷಧಾರೆ ಸುರಿಸಲಿದೆ. ಹಳೇ ಮೈಸೂರು ಭಾಗದ ಪ್ರದೇಶಗಳು ಸೇರಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ. ಇದರಿಂದ ಶ್ರಾವಣಕ್ಕೂ ಮುನ್ನ ವರ್ಷವೈಭವ ಕಾಣಿಸಿಕೊಳ್ಳಲಿದ್ದು, ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರುವ ನಿರೀಕ್ಷೆಯನ್ನು ಹುಟ್ಟಿಸಿದೆ.

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಪ್ರಮಾಣದ ಮಳೆಯಾಗಲಿದ್ದು, ಶುಕ್ರವಾರದಿಂದ ನಾಲ್ಕು ಭಾರೀ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net