

ಹೊನ್ನಾಳಿ: ಅಮಾವಾಸ್ಯೆ ನಂತರ ರಾಜ್ಯದಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಮಳೆಗೂ ಹಾಗೂ ಅನ್ನಕ್ಕೂ ತೊಂದರೆಯಿಲ್ಲ. ಆದರೆ ಪ್ರಕೃತಿಯಿಂದ ಹೆಚ್ಚು ಹಾನಿಯಾಗುವ ಎಲ್ಲ ಲಕ್ಷಣಗಳಿವೆ. ಇದರ ಜತೆೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಗಂಡಾಂತರ ಕಾಡಲಿದೆ ಎಂದು ಅರಸೀಕೆರೆ ತಾಲೂಕಿನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದರು.
ಪಟ್ಟಣದ ಮಂಜುನಾಥ್ ಮಾಳಕ್ಕಿ ಅವರ ಮನೆಗೆ ಬುಧವಾರ ಖಾಸಗಿ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದೆ, ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆ ವೇಳೆಗೆ ಪಕ್ಷಾಂತರ ಹೆಚ್ಚಾದರೂ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರಲ್ಲದೆ, ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಹೇಳಲು ನಿರಾಕರಿಸಿದರು.
ಕಾಲಜ್ಞಾನವೇ ಗುರುಗಳ ಸಂಪತ್ತಾಗಿದ್ದು, ಕಾಲಜ್ಞಾನದಲ್ಲಿ ಕಟ್ಟಿಗೆ ಹಾಡುತ್ತದೆ, ಕಬ್ಬಣ ಓಡುತ್ತದೆ, ಗಾಳಿ ಮಾತನಾಡುತ್ತದೆ ಎಂದು ನೂರಾರು ವರ್ಷಗಳ ಹಿಂದೆಯೇ ಹೇಳಲಾಗಿದ್ದು, ಅದರಂತೆ ಕಟ್ಟಿಗೆ ಮತ್ತು ಕಬ್ಬಣ ಅಂದರೆ ರೈಲುಗಳು ಬಂದಿರುವ ಬಗೆಯಾದರೆ, ಗಾಳಿ ಮಾತನಾಡುತ್ತದೆ ಎಂದರೆ ಮೊಬೈಲ್ ಬಂದಿರುವುದೇ ಸಾಕ್ಷಿ ಎಂದ ಶ್ರೀಗಳು, ಕಲ್ಲಿನ ಕೋಳಿ ಮಾತನಾಡುತ್ತದೆ ಎಂದರೆ ಮೊಬೈಲ್‌ನಲ್ಲಿರುವ ಸಿಮ್ ಎಂದು ಅವರು ವಿವರಿಸಿದರು.
ಪತ್ರಕರ್ತ ಮಲ್ಲೇಶ್ ಮಾಳಕ್ಕಿ, ಮಂಜುನಾಥ್, ನಾಗವೇಣಿ, ಕಾಂಗ್ರೆಸ್ ಜಿಲ್ಲಾ ಯುವ ಮುಖಂಡ ರಂಜಿತ್ ಅಪ್ಪಿನಕಟ್ಟೆ, ಮರಿಸಿದ್ದಪ್ಪ, ರಾಜೇಶ್ವರಿ ಮಾಳಕ್ಕಿ, ಲೋಕೋಪಯೋಗಿ ಇಲಾಖೆ ಎಇಇ ಕಣುಮಪ್ಪ ಇದ್ದರು.
ವಿವಾದ ಹುಟ್ಟುಹಾಕುವುದು ಸಲ್ಲ:
ನಿಮ್ಮ ನಿಮ್ಮ ರಾಜಕಾರಣ ಏನೇ ಇರಲಿ, ಆದರೆ ಧರ್ಮದ ವಿಚಾರವಾಗಿ ಸೂಕ್ಷ್ಮತೆಯಿಂದ ಇದ್ದರೆ ಎಲ್ಲರಿಗೂ ಒಳಿತು. ಸನಾತನ ಧರ್ಮದ ಬಗ್ಗೆ ಅವಹೇಳನ ಮಾತುಗಳು ಹಾಗೂ ತಮ್ಮ ಸ್ವಾರ್ಥಕ್ಕೆ ವಿವಾದ ಹುಟ್ಟುಹಾಕುವುದು ಸಲ್ಲದು. ಯಾವತ್ತೂ ಧರ್ಮದ ವಿಚಾರವಾಗಿ ಅವಹೇಳನದ ಮಾತುಗಳನ್ನಾಡುವ ಯಾರೇ ಆದರೂ ಎಚ್ಚರಿಕೆಯಿಂದ ಮಾತನಾಡಿದರೆ ಹಿತವಾಗಿರುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸುವುದು ಶತಸಿದ್ಧ ಎಂದು ಶ್ರೀಗಳು ಎಚ್ಚರಿಕೆ ಸಂದೇಶ ನೀಡಿದರು.
ಕರ್ನಾಟಕದಲ್ಲಿ ಸ್ವಾಮೀಜಿಗಳು ಜಾತಿಯ ಪರವಾಗಿ ಮಾತನಾಡುತ್ತಾರೆ ಹೊರತು, ಧರ್ಮಕ್ಕೆ ಕಂಟಕ ಬಂದಾಗ ಪರವಾಗಿ ಯಾರೂ ಮಾತನಾಡುವುದಿಲ್ಲವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ಕತ್ತರಿ ಇದ್ದ ಹಾಗೆ ಹಾಗೂ ಧರ್ಮ ಸೂಜಿ ಇದ್ದಹಾಗೆ, ಆದ್ದರಿಂದ ಜಾತಿ ಎನ್ನುವುದು ಚಿಕ್ಕ ವಿಷಯ, ಅದು ಮನೆಯಲ್ಲಿದ್ದರೆ ಸರಿ ಹಾಗೂ ಧರ್ಮ ರಸ್ತೆಯಲ್ಲೇ ಇರಬೇಕು, ಸಣ್ಣಪುಟ್ಟ ತೊಂದರೆಗಳು ಬಂದಾಗ ಜಾತಿಯ ಪರವಾಗಿ ಮಾತನಾಡುವುದು ಸರಿ ಆದರೆ ಅದನ್ನೇ ಅಪ್ಪಿಕೊಳ್ಳಬಾರದು ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಧರ್ಮ ಶಾಂತಿ,ನೆಮ್ಮದಿಯನ್ನು ಕೊಡುತ್ತದೆ. ಅದೇ ಮಾರ್ಗದಲ್ಲಿ ಸಾಗುವುದು ಎಲ್ಲರಿಗೂ ಒಳ್ಳೆಯ ಬೆಳವಣಿಗೆ ಎಂದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಉಚಿತ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಥೇಚ್ಛಚವಾಗಿ ಸಂಪಲ್ಮೂನಗಳಿವೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಉಚಿತ ಯೋಜನೆಗಳಿಂದ ಯಾವುದೇ ತೊಂದರೆ ಇಲ್ಲ ಎಂದಷ್ಟೇ ಮಾತನಾಡಿದರು.