ಬಳ್ಳಾರಿ ಜಿಲ್ಲಾದ್ಯಂತ ಜಿಟಿಜಿಟಿ ಮಳೆ

BLY-26-3
ಬಳ್ಳಾರಿ ನಗರದಲ್ಲಿ ಬುಧವಾರ ಜಿಟಿಜಿಟಿ ಮಳೆಗೆ ಮಕ್ಕಳು ಛತ್ರಿ ಹಿಡಿದು ಸಂಭ್ರಮಿಸುವ ಮೂಲಕ ಸಾಗುತ್ತಿರುವುದು.
Published on

ಬಳ್ಳಾರಿ : ಬಿಸಿಲೂರು ಬಳ್ಳಾರಿ ಜಿಲ್ಲಾದ್ಯಂತ ಬುಧವಾರ ಜಿಟಿಜಿಟಿ ಮಳೆಯಾಗಿದ್ದು, ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಐದು ಮನೆಗಳು ಕುಸಿದಿವೆ. ಸಿರಗುಪ್ಪ ತಾಲೂಕು ವ್ಯಾಪ್ತಿಯಲ್ಲಿ ಎರಡು, ಸಂಡೂರಿ ಮತ್ತು ಕಂಪ್ಲಿಯಲ್ಲಿ ತಲಾ ಎರಡು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ವರದಿಯಾಗಿದೆ.

ಮುಂಜಾನೆಯಿಂದಲೇ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಆರಂಭಗೊಂಡಿದ್ದು, ಸಂಜೆ ವೇಳೆ ವರೆಗೂ ಮುಂದುವರೆದಿತ್ತು. ಇದರಿಂದಾಗಿ ಜಿಲ್ಲಾದ್ಯಂತ ಮಲೆನಾಡಿನ ವಾತಾವರಣ ಸೃಷ್ಠಿಗೊಂಡಿತ್ತು. ಮಳೆಯಿಂದಾಗಿ ಜನರು ಹೈರಾಣಗೊಂಡರು.

ಮಳೆಯಲ್ಲೇ ವಿದ್ಯಾರ್ಥಿಗಳು, ಸಾರ್ವಜನಿಕರು ಛತ್ರಿ ಹಿಡಿದುಕೊಂಡು ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ತೆರಳುತ್ತಿದ್ದವರು ಆಟೋಗಳಲ್ಲಿ ಚಾಲಕರು ಕೇಳಿದಷ್ಟು ಹಣ ನೀಡಿ ತೆರಳಬೇಕಾಯಿತು. ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಗರಿಗೆದರಿದ್ದು, ಮಳೆಯಿಂದಾಗಿ ರೈತರಲ್ಲಿ ಮಂದಹಾಸ ಮೂಡಿಸಿದೆ. ಆದರೆ ಕಳೆದ ಮೂರು ದಿನಗಳಿಂದ ಬಿಸಿಲು ಪ್ರಮಾಣ ತಗ್ಗಿದ್ದು, ಇದರಿಂದಾಗಿ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಳ್ಳುತ್ತಿದೆ.

  • ಜಿಲ್ಲೆಯಲ್ಲಿ 3 ಮಿ.ಮೀ. ಮಳೆ
    ಜಿಲ್ಲೆಯಲ್ಲಿ ಬುಧವಾರ ಸರಾಸರಿ 3 ಮಿ.ಮೀ. ಮಳೆಯಾಗಿದೆ. ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 1.2 ಮಿ.ಮೀ, ಸಂಡೂರು 5.7, ಸಿರಗುಪ್ಪ 4.7, ಕುರುಗೋಡು 1.5, ಕಂಪ್ಲಿ 2.1ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net