

ತುಮಕೂರು: ತಡವಾಗಿಯಾದರೂ ಜಿಲ್ಲೆಯಲ್ಲಿ ಭರ್ಜರಿ ಮಳೆ ಸುರಿಯಲಾರಂಭಿಸಿದೆ, ಮಂಗಳವಾರ ರಾತ್ರಿ ಬಹುತೇಕ ಕಡೆಯಲ್ಲಿಯೂ ಜಿಟಿಜಿಟಿ ಮಳೆ ಸುರಿದಿದೆ, ಅಪರೂಪಕ್ಕೆ ಹಳ್ಳ, ಕೊಳ್ಳಗಳಿಗೆಲ್ಲ ಜೀವಕಳೆ ಬಂದಿದೆ. ಶಿರಾ ಹಾಗೂ ಪಾವಗಡ ತಾಲೂಕಿನಲ್ಲಿ ಚದುರಿದಂತೆ ಮಳೆಯಾಗಿದೆ.
ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆಯಲ್ಲಿ ಅತೀ ಹೆಚ್ಚು ಮಳೆ ಸುರಿದಿದೆ. ಮತಿಘಟ್ಟ 20ಮಿಮೀ, ಹುಳಿಯಾರು 12 ಮಿಮೀ, ಸಿಂಗದಹಳ್ಳಿ 16.2ಮಿಮೀ, ದೊಡ್ಡ ಎಣ್ಣೆಗೆರೆ 11.2, ಶೆಟ್ಟಿಕೆರೆ 8.2, ಬೋರನಕಣಿವೆ 7.4ಮಿಮೀ ಮಳೆ ಬಿದ್ದಿದೆ. ತಿಪಟೂರಿನಲ್ಲಿ 17.4, ನೊಣವಿನಕೆರೆ 14.4, ಹೊನ್ನವಳ್ಳಿ 10, ಕಿಬ್ಬನಹಳ್ಳಿ 6.4ಮಿಮೀ ಮಳೆ ಸುರಿದಿದೆ.
ತುರುವೇಕೆರೆಯಲ್ಲಿ ಅತೀ ಹೆಚ್ಚು 36ಮಿಮೀ, ದಂಡಿನಶಿವರದಲ್ಲಿ 12.5, ಮಾಯಸಂದ್ರ 29.8, ದೆಬ್ಬೇಘಟ್ಟ 30 ಹಾಗೂ ಸಂಪಿಗೆಯಲ್ಲಿ 10ಮಿಮೀ ಮಳೆಯಾಗಿದೆ. ಚಿಕ್ಕನಹಳ್ಳಿ 6.6, ಕಳ್ಳಂಬೆಳ್ಳ 12.4, ಬುಕ್ಕಾಪಟ್ಟಣ 5.1, ಬರಗೂರು 3.4 ಮಿಮೀ ಮಳೆಯಾಗಿದೆ.
ತುಮಕೂರಿನ ವಿವಿಧ ಬಡಾವಣೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ವತಿಯಿಂದ ರಸ್ತೆ ಕಾಮಗಾರಿ, ಫುಟ್‌ಪಾತ್‌ಕಾಮಗಾರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದಾಗಿ ಈ ಕಾಮಗಾರಿ ನಡೆಯುತ್ತಿರುವ ಸ್ಥಳಗಳು ನೀರಿನಿಂದ ಜಲಾವೃತಗೊಂಡು ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗಿತ್ತು.
ಮುಂದಿನ ಐದು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಪಟೂರು ತಾಲೂಕು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ಹಿರಿಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಅ.7ರಂದು ಜಿಲ್ಲೆಯ ಎಲ್ಲ ಭಾಗವದಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೆ.27ರಿಂದ ಅ.10ರವರೆಗೆ ಹಸ್ತ ನಕ್ಷತ್ರದ ಮಳೆಯಿದ್ದು, ಅ.6ರಿಂದ 10ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಮಾಸದಲ್ಲಿ ತೆಂಗು ಬೆಳೆಯಲ್ಲಿ ಪೋಷಕಾಂಶ ನಿರ್ವಹಣೆ ಮುಖ್ಯವಾಗಿದ್ದು ರೈತರು ಕೊಟ್ಟಿಗೆ ಕೊಬ್ಬರ ಹಾಗೂ ಸಾರಜನಕ, ರಂಜಕ ಹಾಗೂ ಪೊಟಾಶ್ ಮೇಲುಗೊಬ್ಬರ ನೀಡಬೇಕು. ಮಾಹಿತಿಗೆ 9449866936, 9739055194 ಸಂಪರ್ಕಿಸಿ.
ಡಾ.ಪದ್ಮನಾಭನ್ ಹಿರಿಯ ವಿಜ್ಞಾನಿ ಕೃಷಿ ಹವಾಮಾನ ಘಟಕ, ಕೊನೇಹಳ್ಳಿ, ತಿಪಟೂರು
ರಸ್ತೆಗೆ ಹಾಕಿದ ವಾರದಲ್ಲೇ ಕಿತ್ತುಬಂದ ಜಲ್ಲಿ (ಪಾವಗಡ): ಪುರಸಭೆ ವತಿಯಿಂದ 28 ಲಕ್ಷ ರೂಪಾಯಿ ವೆಚ್ಚದಲ್ಲಿ ಪಟ್ಟಣದ ವೇಣುಗೋಪಾಲಸ್ವಾಮಿ ಗುಡಿ ಬೀದಿಯಿಂದ ಪೆನುಕೊಂಡ ಊರುಬಾಗಿಲುವರೆಗೆ ಮತ್ತು ಶನಿಮಹಾತ್ಮ ದೇವಸ್ಥಾನದಿಂದ ಬಾಪೂಜಿ ಶಾಲಾ ಮುಂಭಾಗದ ರಸ್ತೆಯವರೆಗೆ ಕಳೆದ ವಾರ ಡಾಂಬರು ಹಾಕಿದ್ದು, ಬುಧವಾರ ಸುರಿದ ಮಳೆಗೆ ರಸ್ತೆಯಲ್ಲಿನ ಜಲ್ಲಿ ಕಿತ್ತು ಬಂದಿದೆ. ಅವೈಜ್ಞಾನಿಕವಾಗಿ ಡಾಂಬರೀಕರಣ ಮಾಡಿದ್ದರಿಂದ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿ ಆಗಿದೆ. ಪುರಸಭೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕೆಂದು ಸುಬ್ಬರಾಯಪ್ಪ, ಸೇತುರಾಂ, ಜಿ.ಎ.ವೆಂಕಟೇಶ್, ಕಾವಲಗೇರಿರಾಮಾಂಜಿನಪ್ಪ, ರಂಜಿತ್ ಕುಮಾರ್ ಒತ್ತಾಯಿಸಿದ್ದಾರೆ.
ನೆಲಕಚ್ಚಿದ ವಾಸದ ಮನೆ, ವಿದ್ಯುತ್ ಕಂಬಗಳು(ತುರುವೇಕೆರೆ): ತಾಲೂಕಿನಾದ್ಯಂತ ಮೂರ‌್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆಲವೆಡೆ ವಾಸದ ಮನೆ, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಮಂಗಳವಾರ ರಾತ್ರಿ ಸುರಿದ ಜಿಟಿಜಿಟಿ ಮಳೆಗೆ ಕಸಬಾ ಹೋಬಳಿಯ ಹೆಗ್ಗೆರೆಯ ಸಿದ್ದಗಂಗಮ್ಮ ಅವರ ವಾಸದ ಮನೆಯ ಗೋಡೆಯು ಭಾಗಶಃ ಕುಸಿದಿದ್ದು, ಪ್ರಾಣ ಹಾನಿಯಾಗಿಲ್ಲ.
ದಂಡಿನಶಿವರ ಹೋಬಳಿಯ ಸಂಪಿಗೆಮಲ್ಲೇನಹಳ್ಳಿ ಹೊರವಲಯದಲ್ಲಿ ಮರ ಬಿದ್ದು ಮೂರು ವಿದ್ಯುತ್ ಕಂಬಗಳು, ದಂಡಿನಶಿವರ-ಅರಕೆರೆ ಮಧ್ಯೆ ಒಂದು ಕಂಬ ಮುರಿದು ಹೋಗಿದೆ. ಹೆಚ್ಚು ಮಳೆಗೆ ಮಾಯಸಂದ್ರ ಹೋಬಳಿಯ ಒಬ್ಬೆನಾಗಸಂದ್ರ ಮತ್ತು ನಾಗಲಾಪುರದಲ್ಲಿ ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿವೆ. ತುರುವೇಕೆರೆ ಶಾಖಾ ವ್ಯಾಪ್ತಿಯ ಮುದ್ಲಾಪುರ, ಹರಿದಾಸನಹಳ್ಳಿ, ಕುಣಿಕೇನಹಳ್ಳಿ-ಪಿ.ಕಲ್ಲಹಳ್ಳಿಯಲ್ಲಿ ವಿದ್ಯುತ್ ಪೂರಕದ ಕಂಬದ ಮೇಲೆ ತೆಂಗಿನ ಮರ ಬಿದ್ದು ಮೂರು ವಿದ್ಯುತ್ ಕಂಬಗಳು ಮುರಿದಿದೆ. ಇನ್ನು ಮುಂಗಾರು ಬೆಳೆಗಳಾದ ರಾಗಿ, ಜೋಳ, ಹರಳು, ಹುರುಳಿ ಜಾಸಿವೆ ಹಾಗೂ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಬಾಳೆ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಪಟ್ಟಣ 36, ದಂಡಿನಶಿವರ 12.5, ಮಾಯಸಂದ್ರ 29.8, ದಬ್ಬೇಘಟ್ಟ 30 ಮತ್ತು ಸಂಪಿಗೆ 10 ಮಿ.ಮೀಟರ್ ಮಳೆಯಾಗಿರುವುದು ಮಳೆಮಾಪಕದಲ್ಲಿ ದಾಖಲಾಗಿದೆ. ಬೆಸ್ಕಾಂ ಶಾಖಾಧಿಖಾರಿಗಳಾದ ನಾರಾಣಪ್ಪ, ಸೋಮಶೇಖರ್, ಎಂ.ಎಲ್.ಉಮೇಶ್ವರಯ್ಯ, ಗ್ರಾಮ ಲೆಕ್ಕಿಗ ರಾಮನಗೌಡ ಭೇಟಿ ನೀಡಿ ಪರಿಶೀಲಿಸಿದರು.