ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ೫ ಲಕ್ಷಕ್ಕೂ ಹೆಚ್ಚು ಹಾನಿ

udp-5-male 1
Published on

ಉಡುಪಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿAದ ವ್ಯಾಪಕ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು, ಕೃಷಿ ಭೂಮಿ ಜಲಾವೃತಗೊಂಡಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಸರಾಸರಿ 120.1 ಮಿ.ಮಿ ಮಳೆ ಸುರಿದಿದೆ.

ಉಡುಪಿ ನಗರದಲ್ಲಿ ಮಳೆ ನೀರು ಹರಿಯುವ ಚರಂಡಿ ಭರ್ತಿಯಾಗಿ ರಸ್ತೆಯಲ್ಲಿ ನೀರು ಹರಿದಿದೆ. ನಗರದ ಕಟ್ಟೆ ಆಚಾರ್ಯ ಮಾರ್ಗದ ಬಳಿ, ನಿಟ್ಟೂರಿನಿಂದ ತಾಂಗದಗಡಿ ಹೋಗುವ ರಸ್ತೆಯಲ್ಲೆ ಮಳೆ ನೀರು ಹರಿಯುತ್ತಿತ್ತು. ಇದರಿಂದ ವಾಹನ ಸಂಚರಕ್ಕೆ ತೊಂದರೆ ಉಂಟಾಯಿತು. ಗುಂಡಿಬೈಲು ಕೃಷಿ ಭೂಮಿಗಳಲ್ಲಿ ಕೃತಕ ನೆರೆ ಸೃಷ್ಟಿಯಗಿದೆ. ಉಡುಪಿಯ ಶ್ರೀ ಕೃಷ್ಣ ಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ನೀರು ನಿಂತಿದೆ. ವಾಹನ ನಿಲುಗಡೆಗೆ ಅಸಾಧ್ಯವಾಗಿತ್ತು. ಪಕ್ಕದಲ್ಲಿ ಹರಿಯುವ ಇಂದ್ರಾಣಿ ನದಿ ಕಲ್ಸಂಕ ಹಳ್ಳದ ಮೂಲಕ ಸಾಗುವ ಮಾರ್ಗದಲ್ಲಿ ಕೃತಕ ನೆರೆಯನ್ನು ಸೃಷ್ಟಿಸಿದೆ. ಮಠದ ಪೆಟ್ಟು ಪರಿಸರದಲ್ಲೂ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ತೀವ್ರತೆಗೆ ಬನ್ಮಂಜೆ, ಶಿರಿಬೀಡು ಸಮೀಪ ಇರುವ ಮೂಡನಿಡಂಬೂರು ಬ್ರಹ್ಮ ಬೈದರ್ಕಳ ಗರೋಡಿಗೆ ನೀರು ನುಗ್ಗಿದೆ. ಸುತ್ತಮುತ್ತಲಿನ ಪರಿಸರದ ಮನೆಗಳಿಗೂ ನೀರು ನುಗ್ಗಿದೆ. ನಿಟ್ಟೂರು ಶಿರಿಬೀಡು ಸಂಪರ್ಕ ರಸ್ತೆಯಲ್ಲಿ ನೀರು ತುಂಬಿದ್ದರಿAದ ಸಾರ್ವಜನಿಕರು ನಡೆದಾಡಲು ಪರದಾಡುವಂತಾಯ್ತು. ಬನ್ನಂಜೆ ಶನೇಶ್ವರ ದೇವಸ್ಥಾನದ ಸುತ್ತಮುತ್ತಲೂ ನೆರೆ ನೀರಿನ ಮಟ್ಟ ಹೆಚ್ಚಾಗಿದೆ. ಗಾಳಿ ಮಳೆಗೆ ಕುಂಜಿಬೆಟ್ಟು, ನಿಟ್ಟೂರು, ವಿಷ್ಣುಮೂರ್ತಿ ನಗರದಲ್ಲಿ ಹಲವೆಡೆ ಮರಗಳು ಧರೆಗೆ ಉರುಳಿದ್ದು, ನಗರಸಭೆ ತುರ್ತು ಕಾರ್ಯಾಚರಣೆ ತಂಡವು ಮರವನ್ನು ತೆರವುಗೊಳಿಸಿದರು.

ಕೊಡಿ ಬೆಂಗ್ರೆ ಕಡಲು ಕೊರೆತ
ಬಾರಿ ಮಳೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿದ್ದು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿದೆ. ಬ್ರಹ್ಮಾವರ ತಾಲೂಕು ಕೋಡಿ ಬೇಂಗ್ರೆ ಲೈಟ್ ಹೌಸ್ ಬಳಿ ಬಾರಿ ಕಡಲ ಕೊರೆತ ಉಂಟಾಗಿದ್ದು, ಸಮುದ್ರದ ಪಕ್ಕದಲ್ಲಿ ಸಂಪರ್ಕಗಾಗಿ ನಿರ್ಮಿಸಲಾಗಿದ್ದ ರಸ್ತೆ ಬಹುತೇಕ ಸಮುದ್ರ ಪಾಲಾಗಿದೆ. ಇನ್ನು ಎರಡು ದಿನಗಳ ಕಾಲ ಮಳೆ ಅಬ್ಬರ ಹೀಗೆ ಮುಂದುವರಿದಲ್ಲಿ ಸಂಪರ್ಕ ರಸ್ತೆ ಜೊತೆಗೆ ದೋಣಿಗಳ ಮಾರ್ಗಸೂಚಿಗಾಗಿ ತೀರದಲ್ಲಿ ಹಾಕಲಾಗಿರುವ ಕಿರು ಲೈಟ್ ಹೌಸ್ ಕೂಡ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

೫ ಲಕ್ಷಕ್ಕೂ ಹೆಚ್ಚು ಹಾನಿ

ಜಿಲ್ಲೆಯ ಕುಂದಾಪುರ, ಆನಗಳ್ಳಿ, ಕುಳುಂಜೆ, ಹಂದಾಡಿ, ಹನೇಹಳ್ಳಿ, ವಾರಂಬಳ್ಳಿ, ಆರೂರು, ಇನ್ನಾ, ಯಡ್ತರೆ, ಕಿರಿಮಂಜೇಶ್ವರ, ಖಂದಕೋಣೆ, ಕುಕ್ಕೆಹಳ್ಳಿ, ಪಡುತೋನ್ಸೆ, ಶಂಕರನಾರಾಯಣ, ಹಾವಂಜೆ ಭಾಗದಲ್ಲಿ ಮರಬಿದ್ದು, ಮನೆ, ಜಾನುವಾರು ಕೊಟ್ಟಿಗೆ, ಅಡಕೆ ತೋಟಗಳು ಹಾನಿಯಾಗಿದ್ದು, ಒಟ್ಟು ೫,೯೦,೦೦೦ ರೂ. ನಷ್ಟ ಅಂದಾಜಿಸಲಾಗಿದೆ. ಉಡುಪಿಯಲ್ಲಿ ೧೩೧, ಬ್ರಹ್ಮಾವರ ೧೦೬.೯, ಕಾಪು ೧೩೦.೭, ಕುಂದಾಪುರ ೯೭.೭, ಬೈಂದೂರು ೧೫೧.೬, ಕಾರ್ಕಳ ೧೨೪.೩, ಹೆಬ್ರಿ ೧೧೬.೬ ಮಿ.ಮಿ ಮಳೆ ಸುರಿದಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಬುಧವಾರ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net