

ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಭಾನುವಾರದಿಂದ (ಮೇ 12) ನಾಲ್ಕು ದಿನಗಳ ಕಾಲ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಗುರ ಅಥವಾ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಧ್ಯೆ ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಚಿಕ್ಕಮಗಳೂರು, ಕೊಡಗು ಹಾಗೂ ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಸೇರಿ ಒಟ್ಟು 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಮಳೆಯಾಗುವ ಪ್ರದೇಶಗಳಲ್ಲಿ ಗುಡುಗು-ಮಿಂಚಿನ ಜತೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿಯೂ ಬೀಸುವ ಸಾಧ್ಯತೆಯೂ ಇದೆ.
ಸತತ ಬರದಿಂದ ಕೆಂಗೆಟ್ಟಿದ್ದ ಜನ ಹಾಗೂ ಜಾನುವಾರುಗಳಿಗೆ ಭಾರೀ ಮಳೆಯಿಂದ ನೀರು ಹಾಗೂ ಮೇವಿನ ಅಭಾವ ನೀಗುವ ಸಾಧ್ಯತೆ ಇದೆ. ಜತೆಗೆ ಕೃಷಿಕರ ಬೇಸಾಯದ ಆರಂಭಿಕ ಚಟುವಟಿಕೆಗೆ ಮಳೆ ನೆರವಾಗುವ ಆಸೆ ಹುಟ್ಟಿಸಿದೆ.
4 ದಿನ ಮಳೆ ನಿರೀಕ್ಷೆ:
ಭಾನುವಾರದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆ ಆಗಲಿದ್ದರೂ, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ 3 ಜಿಲ್ಲೆಗಳಲ್ಲಿ ಹಲವೆಡೆ ಮಾತ್ರ ಭಾರೀ ಮಳೆಯಾಗಲಿದೆ. ಸೋಮವಾರದಿಂದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಹಲವೆಡೆ ಮಳೆಯಾಗಲಿದ್ದು, ಬುಧವಾರದವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಹೊರವಲಯದಲ್ಲಿ ಭಾರೀ ಮಳೆ:
ಬೆಂಗಳೂರಿನ ಉತ್ತರ ಭಾಗ ಹಾಗೂ ಹೊರವಲಯದಲ್ಲಿ ಶನಿವಾರ ಮಧ್ಯರಾತ್ರಿ ಭಾರೀ ಮಳೆಯಾಗಿದೆ. ಗುಡುಗು-ಮಿಂಚಿನಿಂದ ಕೂಡಿದ್ದ ಮಳೆಯ ರಭಸಕ್ಕೆ ಹಲವು ಮರಗಳು ಬುಡಮೇಲಾಗಿ ನೆಲಕ್ಕುರುಳಿವೆ. ಕಾರು, ಬೈಕ್‌ಗಳು ಮರಗಳಡಿ ಸಿಲುಕಿ ನುಜ್ಜುಗುಜ್ಜಾಗಿವೆ. ಬೆಂಗಳೂರು ಉತ್ತರ ತಾಲೂಕಿನ ಕಿತ್ತನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 129 ಮಿ.ಮೀ. ಹಾಗೂ ಕಡಬಗೆರೆಯಲ್ಲಿ 112.5 ಮಿ.ಮೀ. ಪ್ರಮಾಣದಷ್ಟು ದಾಖಲೆಯ ವರ್ಷಧಾರೆ ಆಗಿದೆ.