

ಬಂಟ್ವಾಳ/ ಬದಿಯಡ್ಕ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿಯ ರಾಮಕೃಷ್ಣ ರಾವ್ ಅವರ ಪುತ್ರ ರವಿಕಿರಣ್(23) ಹಾಗೂ ಕಾಸರಗೋಡು ಜಿಲ್ಲೆಯ ಅಡೂರು ಕಾಯರ್ತಿಮೂಲೆ ನಿವಾಸಿ ದಿ.ಲಕ್ಷ್ಮೀನಾರಾಯಣ ಪಡ್ಡಿಲ್ಲಾಯ- ಸತ್ಯಭಾಮಾ ದಂಪತಿ ಪುತ್ರ ಶ್ರೀನಿವಾಸ್ ಪಡ್ಡಿಲ್ಲಾಯ(33) ಕೂಡ ನಾಪತ್ತೆಯಾಗಿದ್ದಾರೆ.
ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ, ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಅವರ ಜತೆ ರವಿಕಿರಣ್ ಹಾಗೂ ಶ್ರೀನಿವಾಸ ಸಹಾಯಕ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಘಟನೆ ಬಳಿಕ ಈ ಐವರೂ ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರವಿಕಿರಣ್ ಹಾಗೂ ಅವರ ಅವಳಿ ಸಹೋದರ ಶಶಿಕಿರಣ್ ಕೆಲ ವರ್ಷದಿಂದ ತಲಕಾವೇರಿ ಕ್ಷೇತ್ರದಲ್ಲಿ ಸಹಾಯಕ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಕರೊನಾ ಲಾಕ್‌ಡೌನ್‌ನಿಂದಾಗಿ ಇಬ್ಬರೂ ಊರಿಗೆ ಮರಳಿದ್ದರು. ಇತ್ತೀಚೆಗಷ್ಟೇ ರವಿಕಿರಣ್ ಕ್ಷೇತ್ರಕ್ಕೆ ಮರಳಿದ್ದರೆ, ಶಶಿಕಿರಣ್ ಊರಿನಲ್ಲಿಯೇ ಉಳಿದಿದ್ದರು.
ಶ್ರೀನಿವಾಸ ಪಡ್ಡಿಲ್ಲಾಯರೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದರು. ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದಷ್ಟೇ ತಲಕಾವೇರಿಗೆ ತೆರಳಿದ್ದರು. ಅವರಿಗೆ ತಾಯಿ ಹಾಗೂ ಇಬ್ಬರು ಸಹೋದರಿಯರಿದ್ದಾರೆ.
ಎಚ್ಚರಿಕೆ ನಿರ್ಲಕ್ಷೃ: ಬ್ರಹ್ಮಗಿರಿ ಬೆಟ್ಟದಲ್ಲಿ ಕಳೆದ ಮಳೆಗಾಲದಲ್ಲೇ ಬಿರುಕು ಕಾಣಿಸಿಕೊಂಡಿತ್ತು. ಬೆಟ್ಟದ ತಪ್ಪಲಲ್ಲಿರುವ ನಾರಾಯಣಾಚಾರ್ ಸೇರಿದಂತೆ ಅಕ್ಕಪಕ್ಕದ ಮನೆಯವರಿಗೆ ಅಲ್ಲಿಂದ ಸ್ಥಳಾಂತರಗೊಳ್ಳುವಂತೆ ತಾಲೂಕಾಡಳಿತ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ನಾರಾಯಣಾಚಾರ್ ಕಡೆಗಣಿಸಿದ್ದರು. ನಾವು ದೇವರ ಕೆಲಸ ಮಾಡುತ್ತಿದ್ದೇವೆ, ದೇವರಿದ್ದಾನೆ ಎಂಬ ಉತ್ತರವನ್ನು ತಾಲೂಕಾಡಳಿತಕ್ಕೆ ನೀಡಿದ್ದರು. ಇದರ ಪರಿಣಾಮ ನಾರಾಯಣಾಚಾರ್ ಹಾಗೂ ಇತರ ನಾಲ್ವರು ಭೂಕುಸಿತ ಬಳಿಕ ನಾಪತ್ತೆಯಾಗಿದ್ದಾರೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಮಾಹಿತಿ ಸಂಗ್ರಹಿಸಿದ ರಾಜೇಶ್ ನಾಕ್
ಗುಡ್ಡ ಕುಸಿತದಿಂದ ಬಂಟ್ವಾಳದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ ನಾಪತ್ತೆಯಾಗಿದ್ದು, ಘಟನೆಯ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಶಾಸಕ ಕೆ.ಜೆ.ಬೋಪಯ್ಯರವರನ್ನು ಮಾಹಿತಿ ಪಡೆದರು.
ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಮಳೆಯ ತೀವ್ರತೆ ಹಾಗೂ ಅಲ್ಲಲ್ಲಿ ಗುಡ್ಡಜರಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಕಾರ್ಯಾಚರಣೆಗೆ ಅಡ್ಡಿಯಾಗಿರುವ ಬಗ್ಗೆ ಕೆ.ಜೆ. ಬೋಪಯ್ಯ ಮಾಹಿತಿ ನೀಡಿದರು.