ಶುರುವಾತು ಮುಂಗಾರು, ಹೊಲದಾಗ ಕೆಲಸ ಜೋರು

hnl krushi story may 26
Published on

ಶ್ರೀನಿವಾಸ್ ಟಿ. ಹೊನ್ನಾಳಿ

ಪೂರ್ವ ಮುಂಗಾರಿನಿಂದ ಹೊನ್ನಾಳಿ- ನ್ಯಾಮತಿ ತಾಲೂಕಿನೆಲ್ಲೆಡೆ ವಾಡಿಕೆಗಿಂತ ಹೆಚ್ಚು ಮಳೆ ವರದಿಯಾಗಿದೆ. ಹೊನ್ನಾಳಿಯಲ್ಲಿ 95 ಮಿಮೀ ಬದಲು 167 ಮಿಮೀ, ನ್ಯಾಮತಿಯಲ್ಲಿ 101.20 ಮಿಮೀ ಬದಲು 126 ಮಿಮೀ ಮಳೆಯಿಂದ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

ಹೊನ್ನಾಳಿಯಲ್ಲಿ ಶೇ.30 ರಷ್ಟು ಮತ್ತು ನ್ಯಾಮತಿಯಲ್ಲಿ ಶೇ.25 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಮುಂಗಾರು ಸಮಯದಲ್ಲೂ ಉತ್ತಮ ಮಳೆ ಬರುವುದೆಂಬ ನಿರೀಕ್ಷೆಯಲ್ಲಿ ಭೂಮಿಯನ್ನು ಹದಗೊಳಿಸುವ, ಕೃಷಿ ಪರಿಕರಗಳಾದ ಕುಂಟೆ, ಪಲಗಾ, ಕೂರಿಗೆ, ನೊಗ, ಬುಕ್ಕಗಳನ್ನು ಸಿದ್ಧಗೊಳಿಸುವ ಜತೆಗೆ ಅವುಗಳ ದುರಸ್ತಿ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.

ಬಿತ್ತನೆ ಗುರಿ: 2025-26ನೇ ಸಾಲಿನಲ್ಲಿ ಅವಳಿ ತಾಲೂಕಿನಲ್ಲಿ ಒಟ್ಟು 48,980 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಅದರಲ್ಲಿ 35980 ಹೆಕ್ಟರ್ ಖುಷ್ಕಿ ಹಾಗೂ 13040 ಹೆಕ್ಟರ್ ನೀರಾವರಿ ಪ್ರದೇಶದಲ್ಲಿ ಹೆಚ್ಚು ಭತ್ತ ಬೆಳೆಯುತ್ತಾರೆ.

ಮೆಕ್ಕೆಜೋಳ 26650 ಹೆ, ಶೇಂಗಾ 3100 ಹೆ, ಹತ್ತಿ 1900 ಹೆ, ತೊಗರಿ 1200 ಹೆ, ಜೋಳ 800 ಹೆ, ರಾಗಿ 450 ಹೆ ಹಾಗೂ ಹಲಸಂದೆ 450 ಹೆ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

ಬೀಜ ಮತ್ತು ರಸಗೊಬ್ಬರ ವಿತರಣೆ: ಕೃಷಿ ಅಧಿಕಾರಿಗಳು ಮೆಕ್ಕೆಜೋಳ 900, ತೊಗರಿ 90, ಅಲಸಂದೆ 5, ನೆಲಗಡಲೆ 110, ಭತ್ತ 100, ರಾಗಿ 70 ಹಾಗೂ ಸೋಯಾಬಿನ್ 50 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಗೆ ತಯಾರಿ ಮತ್ತು ಯೂರಿಯಾ 1382, ಡಿಎಪಿ 568, ಎಂಒಪಿ 246 ಹಾಗೂ ಕಾಂಪ್ಲೆಕ್ಸ್ 1439 ಟನ್ ಸೇರಿ ಒಟ್ಟು 3635 ಟನ್ ಗೊಬ್ಬರ ಈಗಾಗಲೇ ಗೋದಾಮಿನಲ್ಲಿ ಸಂಗ್ರಹವಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ರೈತರಿಗೆ ರಸಗೊಬ್ಬರ ವಿತರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಅವಳಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕಸಬಾ (ಹೊನ್ನಾಳಿ), ನ್ಯಾಮತಿ, ಗೋವಿನಕೋವಿ, ಚಿಲೂರು, ಸಾಸ್ವೇಹಳ್ಳಿ ಹಾಗೂ ಕುಂದೂರು ಗ್ರಾಮಗಳಲ್ಲಿ ವಿತರಿಸಲಾಗುತ್ತದೆ.

ಬಿತ್ತನೆ ನಂತರ ರಸಗೊಬ್ಬರ ಬಳಸುವಾಗ ಯೂರಿಯಾ ಅಥವಾ ಡಿಎಪಿ ಬಳಸುವ ಬದಲು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸಿದರೆ ಮಣ್ಣಿನ ಫಲವತ್ತತೆಗೆ ಹೆಚ್ಚು ಸಹಕಾರಿಯಾಗಲಿದೆ. ಸಾಧ್ಯವಾದಷ್ಟು ಕಾಂಪ್ಲೆಕ್ಸ್ ಗೊಬ್ಬರವನ್ನೇ ಬಳಸಿ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಎನ್. ವಿಶ್ವನಾಥ್ ರೈತರಲ್ಲಿ ಮನವಿ ಮಾಡಿದ್ದಾರೆ.

ಮುಂಗಾರಿಗೂ ಮೊದಲೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರೈತರು ಸಹ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ರಾಜ್ಯದಲ್ಲಿ ಎಲ್ಲಿಯೂ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡಿದೆ. ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ಈಗಾಗಲೇ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಂಗ್ರಹ ಮಾಡಿದ್ದು ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗುವುದು. ಬೀಜ ಹಾಗೂ ರಸಗೊಬ್ಬರ ವಿಚಾರದಲ್ಲಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. | ಡಿ.ಜಿ. ಶಾಂತನಗೌಡ, ಶಾಸಕ ರೈತರು ಏಕದಳ ಬೆಳೆಗಳನ್ನೇ ಹೆಚ್ಚು ಬೆಳೆಯಲು ಒಲವು ಹೊಂದುತ್ತಾರೆ. ಆದರೆ ಆಹಾರ ಭದ್ರತೆಯಡಿ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳನ್ನು ಬೆಳೆಯಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಕೃಷಿ ಇಲಾಖೆಯಿಂದ ನೀಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. | ಬಿ.ಎನ್. ವಿಶ್ವನಾಥ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ, ಹೊನ್ನಾಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net