24 ಗಂಟೆಯಲ್ಲಿ 44.4 ಮಿ.ಮೀ ಮಳೆ | Rain

gundamagere
rain
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲಾದ್ಯಂತ ಮಳೆ(Rain)ಯಾರ್ಭಟ ಮುಂದುವರೆದಿದೆ, ಕಳೆದ 24 ಗಂಟೆ ಅವಧಿಯಲ್ಲಿ 44.4 ಮೀ.ಮೀ ಮಳೆಯಾಗಿದ್ದು, ಕಳೆದ ನಾಲ್ಕೈದು ವರ್ಷದಲ್ಲಿ ದಾಖಲೆ ಎನಿಸಿದೆ. ಅಕ್ಟೋಬರ್‌ನಲ್ಲಿ ವಾಡಿಕೆ 24 ಮಿ.ಮೀ ಮಳೆಯಾಗಬೇಕಿತ್ತು. ಆದರೆ ವಾಯಭಾರ ಕುಸಿತದ ಪರಿಣಾಮವಾಗಿ ಶೇ.983 ವರ್ಷಧಾರೆಯಾಗಿದೆ.

7 ದಿನದಲ್ಲಿ 126 ಮಿ.ಮೀ ಮಳೆ:

ಹವಾಮಾನ ವೈಪರಿತ್ಯದಿಂದ ಕಳೆದ 7 ದಿನದಲ್ಲಿ ಜಿಲ್ಲೆಯಲ್ಲಿ 126.8 ಮಿ.ಮೀ ಮಳೆ ಸುರಿದಿದೆ, ಅಕ್ಟೋಬರ್‌ನಲ್ಲಿ ವಾಡಿಕೆ ಮಳೆ 113.6 ಮಿ.ಮೀ ಇದ್ದು, ಸರಾಸರಿ 202 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದೆ, ದೇವನಹಳ್ಳಿ ತಾಲೂಕು ಆವತಿ ಭಾಗದಲ್ಲಿ 176.5 ಮಿ.ಮೀ ಹಾಗೂ ವೆಂಕಟಗಿರಿ ಕೋಟೆ ವ್ಯಾಪ್ತಿಯಲ್ಲಿ 173.3 ಮಿ.ಮೀ ಮಳೆಯಾಗಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾದ ಪ್ರದೇಶಗಳ ಪೈಕಿ ದೇವನಹಳ್ಳಿಯೂ ಸೇರಿದೆ.

ಕೆರೆಗಳಲ್ಲಿ ಕೋಡಿ:

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಕೆರೆ ಎನಿಸಿರುವ ಗುಂಡಮಗೆರೆ ಕೆರೆ ತುಂಬಿ ಕೋಡಿ ಬಿದ್ದಿದೆ, ಅದೇ ರೀತಿ ಮಧುರೆಯ ದೊಡ್ಡಕೆರೆಗೂ ನೀರಿನ ಹರಿವು ಹೆಚ್ಚಿದೆ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳ ಕುಡಿವ ನೀರಿನ ಪ್ರಮುಖ ಸೆಲೆಯಾಗಿರುವ ಜಕ್ಕಲಮೊಡಗು ಜಲಾಶಯವೂ ಭರ್ತಿಯಾಗಿದೆ. ಅದೇ ರೀತಿ ಹೊಸಕೋಟೆ ಹಾಗೂ ದೇವನಹಳ್ಳಿಯಲ್ಲಿನ ಕೆರೆಗಳಲ್ಲಿ ಜಲರಾಶಿ ಕಾಣಿಸಿಕೊಂಡಿದೆ, ಸಣ್ಣಪುಟ್ಟ ಕುಂಟೆಗಳು, ಕೆರೆಗಳಲ್ಲಿ ಮಳೆ ನೀರು ತುಂಬುತ್ತಿದೆ.

ಹೂ, ತರಕಾರಿ ನಷ್ಟ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿನ ತೋಟಗಾರಿಕೆ ಬೆಳೆಗಳಾದ ತರಕಾರಿ ಹಾಗೂ ಹೂವಿನ ಬೆಳೆ ನೆಲಕಚ್ಚಲಾರಂಭಿಸಿದೆ, ಜಮೀನುಗಳಲ್ಲಿ ನೀರು ನಿಂತು ಬೆಳೆ ಕೊಳೆಯಲಾರಂಭಿಸಿದ್ದು ರೈತರು ತೀವ್ರ ಆತಂಕಗೊಂಡಿದ್ದಾರೆ, ಜಿಲ್ಲೆಯ ಪ್ರಧಾನ ಬೆಳೆ ರಾಗಿಗೂ ಕಂಟಕ ಎದುರಾಗಿದೆ, ಮಳೆ ಹೀಗೆ ಮುಂದುವರೆದರೆ ರಾಗಿ ೈರು ಸಂಪೂರ್ಣ ನೆಲಕಚ್ಚಲಿದೆ ಎಂಬ ಆತಂಕ ತಲೆದೂರಿದೆ.

ಕರೆಂಟ್ ಕಣ್ಣಾಮುಚ್ಚಾಲೆ:

ಮಳೆ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಪವರ್ ಕಟ್ ಮುಂದುವರೆದಿದೆ, ಭಾನುವಾರ ತಡರಾತ್ರಿ ಆರಂಭವಾದ ಮಳೆಯಿಂದ ಹಲವು ಹಳ್ಳಿಗಳಲ್ಲಿ ದಿನವಿಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು, ಇನ್ನು ಕೆಲವು ಕಡೆಗಳಲ್ಲಿ ಮರಗಳ ಕೊಂಬೆ ಮುರಿದು ವಿದ್ಯುತ್ ತಂತಿಗಳು ತುಂಡಾಗಿದ್ದರಿಂದ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ದೀಪಾವಳಿಗೆ ಹೂ ದುಬಾರಿ:

ವಾರದಿಂದ ಜಡಿ ಮಳೆಯೊಂದಿಗೆ ಮಳೆ ಬಿರುಸು ಪಡೆಯುತ್ತಿದ್ದು, ಜಿಲ್ಲೆಯಲ್ಲಿನ ಬಹುತೇಕ ಹೂ ಬೆಳೆಗೆ ಕಂಟಕ ಎದುರಾಗಿದೆ, ಕೆಲವು ಕಡೆಗಳಲ್ಲಿ ಹೂ ಗಿಡಗಳು ಜಮೀನುಗಳಲ್ಲೇ ಕೊಳತೆ ಪರಿಣಾಮ ರೈತರು ಅವುಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ, ರಾಜ್ಯ ರಾಜಧಾನಿ ಸೇರಿ ನೆರೆ ರಾಜ್ಯಗಳಿಗೂ ರಪ್ತಾಗುತ್ತಿದ್ದ ಜಿಲ್ಲೆಯ ಹೂವಿಗೆ ಸಂಕಷ್ಟ ಎದುರಾಗಿದ್ದು, ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೂವಿನ ದರ ಗಗನಮುಖಿಯಾಗಲಿದೆ.

ನಗರ, ಪಟ್ಟಣಗಳಲ್ಲಿ ಬಂದ್:

ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನದ ವೇಳೆ ಸುರಿದ ಭಾರಿ ಮಳೆಗೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅೋಷಿತ ಬಂದ್ ವಾತಾವರಣ ಕಂಡುಬಂತು, ರಸ್ತೆಗಳಲ್ಲಿ ಜಲಪಾತದಂತೆ ಮಳೆ ನೀರು ಹರಿದುಬರುತ್ತಿದ್ದ ದೃಶ್ಯ ಕಂಡುಬಂತು, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರಕ್ಕೆ ತೆರೆ ಎಳೆದು ಮನೆಗಳತ್ತ ಹೆಜ್ಜೆ ಹಾಕಿದರು, ಮಳೆ ರಕ್ಷಣೆ ಪಡೆಯಲು ಜನ ಅಂಗಡಿಮುಂಗಟ್ಟುಗಳ ಆಶ್ರಯ ಪಡೆದ ದೃಶ್ಯ ಕಂಡುಬಂತು. ಮ್ಯಾನ್‌ಹೋಲ್‌ಗಳು ಉಕ್ಕಿ ರಸ್ತೆಯಲ್ಲಾ ಜಲಾವೃತಗೊಂಡಿತ್ತು.

ಅತೀವೃಷ್ಟಿಯಿಂದ ತೋಟಗಾರಿಕೆ ಬೆಳೆ ನಾಶವಾದರೆ ಪರಿಹಾರ ದೊರೆಯಲಿದೆ, ಕ್ರಾಪ್ ಸರ್ವೆಯಲ್ಲಿ ಬೆಳೆ ನಮೂದಾಗಿರಬೇಕು, ಪರಿಶೀಲನೆ ನಡೆಸಿ ತಹಸೀಲ್ದಾರ್‌ಗೆ ವರದಿ ಸಲ್ಲಿಸಲಾಗುವುದು, ಅವರ ಮೂಲಕ ಜಿಲ್ಲಾಧಿಕಾರಿಗೆ ವರದಿ ಹೋಗಿ ಅಲ್ಲಿಂದ ಕಂದಾಯ ಇಲಾಖೆ ಮೂಲಕ ನಿಗಧಿತ ಪರಿಹಾರ ದೊರೆಯಲಿದೆ. ಗ್ರಾಮಲೆಕ್ಕಾಧಿಕಾರಿ ಲಾಗಿನ್ ಮೂಲಕ ಅನುದಾನ ಲಾನುಭವಿಗಳ ಖಾತೆಗೆ ಜಮೆ ಆಗಲಿದೆ.

ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net