

ಮೈಸೂರು: ನಗರದಲ್ಲಿ ಮಳೆ ಮುಂದುವರಿದಿದ್ದು, ಸೋಮವಾರ ಸಂಜೆ ಗುಡುಗು ಸಹಿತ ಜೋರು ಮಳೆ ಸುರಿಯಿತು.
ವರುಣನ ಆರ್ಭಟಕ್ಕೆ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದು, ಅವಾಂತರ ಸೃಷ್ಟಿಯಾಯಿತು. ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯಾಗಿದ್ದ ಮರಗಳ ಕೊಂಬೆಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬಹುತೇಕ ಕಡೆ ವಿದ್ಯುತ್ ತಂತಿಗಳ ಮೇಲೆ ಮರಗಳ ಕೊಂಬೆ ಉರುಳಿದ ಪರಿಣಾಮ ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೂ ಮೋಡಕವಿದ ವಾತಾವರಣ ಇತ್ತಾದರೂ ಸಂಜೆ 7 ಗಂಟೆ ವೇಳೆಗೆ ಸ್ವಲ್ಪ ಸೋನೆಯೊಂದಿಗೆ ಆರಂಭವಾದ ಮಳೆ ನಂತರ ಜೋರಾಗಿಯೇ ಸುರಿಯಿತು. ಪರಿಣಾಮ, ತಗ್ಗು ಪ್ರದೇಶಕ್ಕೆ ನೀರು ಹರಿಯಿತು. ಜನ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಜನರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ಕಂಡುಬಂತು.
ಸಾಕಷ್ಟು ಜನರು ಅಂಗಡಿ -ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ನಂತರ ತೆರಳಿದರು. ಹೆಚ್ಚಾಗಿ ಮಳೆಯಾದ ಚಾಮುಂಡಿಪುರಂ, ಕೆ.ಜಿ.ಕೊಪ್ಪಲು, ವಿದ್ಯಾರಣ್ಯಪುರಂ, ಅಶೋಕಪುರಂ, ಕುವೆಂಪುನಗರ, ಜೆ.ಪಿ.ನಗರ, ಅಗ್ರಹಾರ, ಶಾರದಾದೇವಿನಗರ, ಬೋಗಾದಿ, ಕನಕದಾಸನಗರ, ಜನತಾನಗರ ಸೇರಿದಂತೆ ಹಲವೆಡೆ ರಸ್ತೆ, ಮೋರಿ, ಒಳಚರಂಡಿಗಳಲ್ಲಿ ನೀರು ಉಕ್ಕಿ ಹರಿಯಿತು.
ನಗರದ ಹೃದಯಭಾಗ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಸಯ್ಯಜಿರಾವ್ ರಸ್ತೆ, ಶಿವರಾಂಪೇಟೆ, ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಭರ್ತಿಯಾಗಿದ್ದ ಕಾರಣ ಸಂಚರಿಸಲು ವಾಹನ ಸವಾರರು ಹರಸಾಹಸಪಟ್ಟರು.