ಮೈಸೂರಿನಲ್ಲಿ ಧಾರಾಕಾರ ಮಳೆ

Heavy rain in Mysore
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ಸಂಜೆ ದಿಢೀರಾಗಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಧಾರಾಕಾರ ಮಳೆ ಸುರಿ ಯಿತು. ಭಾರಿ ಮಳೆಯಿಂದ ಸ್ವಲ್ಪ ಹೊತ್ತು ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಬೆಳಗ್ಗಿನಿಂದ ಸಂಜೆವರೆಗೆ ನಗರದಲ್ಲಿ ಬಿಸಿಲಿನ ವಾತಾವರಣ ಕಂಡು ಬಂದು ಮಳೆ ಬರುವ ಮುನ್ಸೂಚನೆ ಇರಲಿಲ್ಲ. ಆದರೆ, ಸಂಜೆ ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣದೊಂದು ವರುಣ ಆರ್ಭಟಿಸಲು ಪ್ರಾರಂಭಿಸಿದ. ಸಂಜೆ 4.45 ರಿಂದ 5.15ರವರೆಗೆ ಭಾರಿ ಮಳೆ ಸುರಿಯಿತು.

ಅರ್ಧ ತಾಸು ಮಳೆಯ ಅಬ್ಬರಿಂದ ಭಾರಿ ಪ್ರಮಾಣದಲ್ಲಿ ಮಳೆ ನೀರು ರಸ್ತೆಗಳಲ್ಲಿ ಹರಿದು ವಾಹನ ಸಂಚಾರ ದುಸ್ತರವಾಯಿತು. ನಗರದ ಹಲವಾರು ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯಿತು. ಒಂದೆಡೆಯಿಂದ ಮತ್ತೊಂದೆಡೆ ತೆರಳುತ್ತಿದ್ದ ಜನರು ಮಳೆಯಿಂದಾಗಿ ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆದು ಮಳೆ ನಿಂತ ನಂತರ ತಮ್ಮ ಪಯಣ ಮುಂದುವರೆಸಿದರು.

ತುಂತುರು ಮಳೆ ಸಾಧ್ಯತೆ: ಜಿಲ್ಲೆಯಲ್ಲಿ ಜೂ.29 ರಿಂದ ಜು.2ರವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ.ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೂ.29 ರಂದು 1 ಮಿ.ಮೀ., 30 ರಂದು 2 ಮಿ.ಮೀ., ಜು.1 ರಂದು 1 ಮಿ.ಮೀ., 2 ರಂದು 2 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಶೇ.4 ಮಳೆ ಕೊರತೆ: ಜಿಲ್ಲೆಯಲ್ಲಿ ಜೂನ್ 1 ರಿಂದ 8ರವರೆಗೆ ಶೇ.4 ರಷ್ಟು ಮಳೆಯ ಕೊರತೆ ಕಂಡು ಬಂದಿದೆ. 87.5 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, 84 ಮಿ.ಮೀ. ಮಳೆಯಾಗಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ 157.2 ಮಿ.ಮೀ. (ವಾಡಿಕೆಗಿಂತ ಶೇ.90 ರಷ್ಟು ಹೆಚ್ಚು), ನಂಜನಗೂಡಿನಲ್ಲಿ 63.8 ಮಿ.ಮೀ. (ಶೇ.16 ಹೆಚ್ಚು) ಮಳೆಯಾಗಿದೆ. ಹುಣಸೂರು ತಾಲೂಕಿನಲ್ಲಿ 71.7 ಮಿ.ಮೀ. ಮಳೆಯಾಗಿದ್ದು, ವಾಡಿಕೆಯಷ್ಟೇ ಮಳೆಯಾಗಿದೆ.

ಕೆ.ಆರ್. ನಗರ ತಾಲೂಕಿನಲ್ಲಿ 37.5 ಮಿ.ಮೀ. (ಶೇ.44 ಕೊರತೆ), ಮೈಸೂರು ತಾಲೂಕಿನಲ್ಲಿ 66.3 ಮಿ.ಮೀ. (ಶೇ.8 ಕೊರತೆ), ಪಿರಿಯಾಪಟ್ಟಣದಲ್ಲಿ 77.6 ಮಿ.ಮೀ. (ಶೇ.23 ಕೊರತೆ), ತಿ.ನರಸೀಪುರದಲ್ಲಿ 57.2 ಮಿ.ಮೀ. (ಶೇ.10 ಕೊರತೆ), ಸರಗೂರಿನಲ್ಲಿ 108 ಮಿ.ಮೀ. (ಶೇ.10 ಕೊರತೆ), ಸಾಲಿಗ್ರಾಮದಲ್ಲಿ 56.3 ಮಿ.ಮೀ. (ಶೇ.16 ಕೊರತೆ) ಮಳೆಯಾಗಿದೆ.

ಒಳ ಹರಿವು ಹೆಚ್ಚಳ: ಕಳೆದ ಕೆಲವು ದಿನಗಳಿಂದ ವಯನಾಡು ಹಾಗೂ ಎಚ್.ಡಿ. ಕೋಟೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಪ್ರಮುಖ ಜಲಾಶಯವಾದ ಕಬಿನಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಯಾಗುವ ಹಂತ ತಲುಪುತ್ತಿದೆ. ಜಲಾಶಯಕ್ಕೆ 27,231 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ. 2284 ಅಡಿಗಳಷ್ಟು (ಸಮುದ್ರಮಟ್ಟದಿಂದ) ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2279.23 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

2380 ಅಡಿಗಳಷ್ಟು (ಸಮುದ್ರಮಟ್ಟದಿಂದ)ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ನುಗು ಜಲಾಶಯದಲ್ಲಿ ಪ್ರಸ್ತುತ 1840 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 2372 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು ಇಲ್ಲ. 2425 ಅಡಿಗಳಷ್ಟು (ಸಮುದ್ರಮಟ್ಟದಿಂದ)ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ತಾರಕ ಜಲಾಶಯದಲ್ಲಿ ಪ್ರಸ್ತುತ 2418.82 ಅಡಿ ಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 96 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net