ಮೈಸೂರಿನಲ್ಲಿ ಧಾರಾಕಾರ ಮಳೆ

Rain
Published on

ಮೈಸೂರು: ನಗರದಲ್ಲಿ ಮಂಗಳವಾರ ಸಂಜೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಧಾರಾಕಾರ ಮಳೆ ಸುರಿಯಿತು. ದಿಢೀರಾಗಿ ಸುರಿದ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ನಗರದಲ್ಲಿ ಸಂಜೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಮಳೆ ಬರುವ ಮುನ್ಸೂಚನೆ ನೀಡಿತ್ತು. ಸಂಜೆ 5.10ಕ್ಕೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿತು. ಮಳೆಯೊಂದಿಗೆ ಗಾಳಿಯ ತೀವ್ರತೆ ಸಹ ಹೆಚ್ಚಾಗಿ ಇತ್ತು. ಹೀಗಾಗಿ ನಗರದ ವಿವಿಧೆಡೆ ಮರ, ಮರದ ಕೊಂಬೆಗಳು ಮುರಿದು ಬಿದ್ದು ನಗರದ ಸಾಕಷ್ಟು ಬಡಾವಣೆಗಳು ಕತ್ತಲೆಯಲ್ಲಿ ಮುಳುಗಿತು.

ನಿರಂತರ ಒಂದು ತಾಸು ಸುರಿದ ಮಳೆಯಿಂದ ಜನರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಯಿತು. ರಸ್ತೆಗಳಲ್ಲಿ ನೀರು ಭಾರಿ ಪ್ರಮಾಣದಲ್ಲಿ ಹರಿದ ಹಿನ್ನೆಲೆಯಲ್ಲಿ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರಿಸಿ ದರು. ನಗರದ ಸಾಕಷ್ಟು ರಸ್ತೆಗಳು ಪುಟ್ಟ ಜರಿಗಳಂತೆ ಕಂಡು ಬಂತು. ಭಾರಿ ಮಳೆಯಿಂದ ಜನರು ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆದು ಮಳೆ ನಿಂತ ನಂತರ ಪಯಣ ಮುಂದುವರೆಸಿದರು.

ನಗರದ ವಿದ್ಯಾರಣ್ಯಪುರಂ ಗ್ರಂಥಾಲಯ ಪಾರ್ಕ್ ಸಮೀಪ ಮಂಗಳವಾರ ಬೆಳಗ್ಗೆ ಬೃಹತ್ ಗಾತ್ರದ ಗುಲ್‌ಮೊಹರ್ ಮರ ಧರೆಗುರುಳಿತು. ಈ ಮರದ ಕೆಳ ಭಾಗದಲ್ಲಿ ನಿಲುಗಡೆ ಮಾಡಿದ್ದ ಕಾರು ಹಾಗೂ ಸ್ಕೂಟರ್ ಜಖಂಗೊಂಡಿದೆ. ಉದ್ಯಾನದಲ್ಲಿ ಪ್ರತಿನಿತ್ಯ ಸಾಕಷ್ಟು ಜನರು ಓಡುತ್ತಿದ್ದರು. ಅದೃಷ್ಟವಶಾತ್ ಂಾವುದೇ ಅಪಾಂು ಸಂಭವಿಸಿಲ್ಲ. ಸಂಜೆ ಸುರಿದ ಮಳೆಯಿಂದ ಮಹಾರಾಜ ಕಾಲೇಜಿನ ಬಳಿ ಮರವೊಂದು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಚಾಮರಾಜಪುರಂ ಜಯಲಕ್ಷ್ಮೀ ವಿಲಾಸ ರಸ್ತೆಯಲ್ಲಿ ಗಾಳಿಯ ರಭಸಕ್ಕೆ ಮರದ ಕೊಂಬೆಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ, ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದ ಹಿನ್ನೆಲೆಯಲ್ಲಿ ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಸ್ಥಳಕ್ಕೆ ನಗರ ಪಾಲಿಕೆಯ ಅಭಯ ತಂಡದವರು ಹಾಗೂ ಸೆಸ್ಕ್ ಸಿಬ್ಬಂದಿ ತೆರಳಿ ಮರ ತೆರವುಗೊಳಿಸಿ ವಿದ್ಯುತ್ ಮಾರ್ಗಗಳನ್ನು ಸರಿ ಪಡಿಸುವ ಕಾರ್ಯ ಮಾಡಿದರು.

ಐದು ದಿನ ಮಳೆ ಸಾಧ್ಯತೆ

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಐದು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 14 ರಂದು 20 ಮಿ.ಮೀ., 15 ರಂದು 11 ಮಿ.ಮೀ., 16 ರಂದು 10 ಮಿ.ಮೀ., 17 ರಂದು 7 ಮಿ.ಮೀ., 18 ರಂದು 6 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ 19 ರಿಂದ 20, ಗರಿಷ್ಠ 35 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗಾಳಿಯು ಗಂಟೆಗೆ 6 ರಿಂದ 8 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ. ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net