

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ದಿನವಿಡೀ ಮೋಡ ಕವಿದ ವಾತಾವರಣದ ಮಧ್ಯೆಯೂ ಹಲವೆಡೆ ಬಿರುಸು ಮಳೆಯಾಗಿದೆ.
ಕಳೆದೆರಡು ದಿನಗಳಿಂದ ಸೀಮಿತ ಪ್ರದೇಶಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿತ್ತು. ಬದಲಾದ ವಾತಾವರಣದಿಂದ ಸಂಜೆ ಹಾಗೂ ರಾತ್ರಿ ತಲಾ ಅರ್ಧ ಗಂಟೆಗೂ ಹೆಚ್ಚು ಸಮಯ ವರ್ಷಧಾರೆಯಾಯಿತು. ಸರಾಸರಿ 10 ಮಿ.ಮೀ. ಮಳೆಯಾಗಿದ್ದು, ನಗರದ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗಿದೆ.
ವಿಧಾನಸೌಧ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ದಾಸರಹಳ್ಳಿ, ಮೇಖ್ರಿ ವೃತ್ತ, ಹೆಬ್ಬಾಳ, ಬ್ಯಾಟರಾಯನಪುರ, ಯಲಹಂಕ ಇತ್ಯಾದಿ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಸಂಜೆ ಕಚೇರಿಯಿಂದ ವಾಪಸ್ ಮನೆಗೆ ತೆರಳುವ ವೇಳೆ ಜೋರು ಮಳೆಗೆ ಸವಾರರು ಪರದಾಡಿದರು. ರಸ್ತೆಬದಿ ವಾಹನಗಳನ್ನು ನಿಲ್ಲಿಸಿ ಮಳೆಯಿಂದ ಆಸರೆ ಪಡೆಯಲು ಅಂಗಡಿ, ಮಳಿಗೆಗಳತ್ತ ಧಾವಿಸಿದರು. ಕೆಲವರು ಬಸ್ ನಿಲ್ದಾಣದ ಬದಿಯಲ್ಲೇ ವಾಹನ ನಿಲ್ಲಿಸಿ ತಂಗುದಾಣದಲ್ಲಿ ಬಹಳ ಹೊತ್ತು ನಿಂತು ನಂತರ ವಾಪಸ್ ಮನೆಯತ್ತ ತೆರಳಿದರು.
ವಾರಾಂತ್ಯದವರೆಗೂ ಮಳೆ:
ನಗರದಲ್ಲಿ ಈ ವಾರಾಂತ್ಯದವರೆಗೂ ಮಳೆ ಮುಂದುವರಿಯಲಿದೆ. ಭಾನುವಾರದವರೆಗೆ ಹೆಚ್ಚಿನ ಕಡೆಗಳಲ್ಲಿ ಸಾಧಾರಣ ಪ್ರಮಾಣದ ವರ್ಷಧಾರೆ ಆಗಲಿದ್ದು, ನಂತರದ ದಿನಗಳಲ್ಲಿ ವರ್ಷಧಾರೆ ತುಸು ಕ್ಷೀಣವಾಗುವ ಸಾಧ್ಯತೆ ಇದೆ.