

ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಗುಂಡಿಗಳಿಂದ ಸುಗಮವಾಗಿ ವಾಹನ ಚಲಾಯಿಸಲು ಸವಾರರು ಪರದಾಡುತ್ತಿರುವ ನಡುವೆಯೂ ಗುರುವಾರ ಮುಂಜಾನೆ ಮತ್ತು ರಾತ್ರಿಯಲ್ಲಿ ಧಾರಾಕಾರವಾಗಿ ಮಳೆಯಾಗಿತ್ತು.
ಇದರ ಪರಿಣಾಮ ಜಂಕ್ಷನ್ ಮತ್ತು ಅಂಡರ್‌ಪಾಸ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ದಟ್ಟಣೆಯಾಗಿ ಸವಾರರಿಗೆ ಇನ್ನಷ್ಟು ತೊಂದರೆಯಾಯಿತು. ಸಿಲ್ಕ್‌ಬೋರ್ಡ್,ಶಿವಾನಂದ ಸರ್ಕಲ್, ಓಕಳಿಪುರ ಜಂಕ್ಷನ್, ಕೆ.ಆರ್.ವೃತ್ತ ಬಳಿ ಅಂಡರ್‌ಪಾಸ್‌ನಲ್ಲಿ ನೀರು ಶೇಖರಣೆಗೊಂಡಿತ್ತು.
ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಇಲ್ಲದ ಕಾರಣ ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿತ್ತು. ಹಲವೆಡೆ ಮ್ಯಾನ್‌ಹೋಲ್ ದುರಸ್ತಿ ಮಾಡದ ಕಾರಣ ಕೊಳಚೆ ನೀರು ರಸ್ತೆಮೇಲೆ ಹರಿಯುತ್ತಿತ್ತು. ಒಳಚರಂಡಿ ಸೇರಿ ಇತರೆ ಕಾಮಗಾರಿಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ಮೋಡ ಕವಿದ ವಾತಾವರಣದೊಂದಿಗೆ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಸುರಿದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು.
ಕೆ.ಆರ್.ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಸವನಗುಡಿ, ಆರ್.ಟಿ.ನಗರ, ಸಹಕಾರನಗರ, ಜಯನಗರ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ದಾಸರಹಳ್ಳಿ, ಹೆಬ್ಬಾಳ, ಯಲಹಂಕ ವೈಟ್‌ಪೀಲ್ಡ್, ಜೆ.ಪಿ.ನಗರ, ವಿ.ನಾಗೇನಗಹಳ್ಳಿ, ಹೆಬ್ಬಾಳ, ಗೊಟ್ಟಿಗೆರೆ, ಅರಕೆರೆ, ರಾಮಮೂರ್ತಿನಗರ, ಎಚ್‌ಎಎಲ್ ವಿಮಾನ ನಿಲ್ದಾಣ, ನಂದಿನಿ ಲೇಔಟ್ ಮತ್ತು ಸರ್ಜಾಪುರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು. ಸಂಜೆ ವೇಳೆ ಮನೆಗೆ ತೆರಳುವ ಧಾವಂತದಲ್ಲಿ ಕೆಲವರು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದರು. ಕೆಲವೆಡೆ ಕೊಂಬೆ ಬಿದ್ದಿರುವ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಕ್ಕೆ ದೂರು ದಾಖಲಾಯಿತು.
ಐದು ದಿನ ಸಾಧಾರಣ: ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 5 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 21 ಡಿ.ಸೆ. ಇರಲಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಪ್ರದೇಶ ಮಿಮೀ
ಅರಕೆರೆ 33
ಬೊಮ್ಮನಹಳ್ಳಿ 29
ಬೀಳಕಹಳ್ಳಿ 25
ನಾಗಪುರ 25
ಎಚ್‌ಎಸ್‌ಆರ್ ಲೇಔಟ್ 22
ಆರ್.ಆರ್.ನಗರ 22
ಕೋರಮಂಗಲ 22
ನಾಯಂಡಹಳ್ಳಿ 21
ಬಿಟಿಎಂ ಲೇಔಟ್ 20
ಸಂಪಂಗಿರಾಮನಗರ 19
ಹಂಪೆನಗರ 15
ವಿದ್ಯಾಪೀಠ 15
ಚಾಮರಾಜಪೇಟೆ 11