ಮಡಿಕೇರಿಯಲ್ಲಿ ಅಬ್ಬರಿಸಿದ ಮಳೆ

1mdks11 - Copy
Published on

ಮಡಿಕೇರಿ: ಮಡಿಕೇರಿಯಲ್ಲಿ ಗುರುವಾರ ಸಂಜೆ ವೇಳೆ ಸತತ ಒಂದು ಗಂಟೆ ಧಾರಾಕಾರವಾಗಿ ಸುರಿದ ಮಳೆಯಿಂದ ಸಂಕಷ್ಟ ಎದುರಾಯಿತು. ೫.೩೦ ರಿಂದ ೬.೩೦ ರವರೆಗೆ ನಿರಂತರವಾಗಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಯಿತು. ತೋಡು, ಚರಂಡಿ ಉಕ್ಕಿ ಹರಿದು ಕಷ್ಟನಷ್ಟ ಅನುಭವಿಸುವಂತಾಯಿತು.

ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ ವಾಹನ ಸಂಚಾರ ಸೇರಿದಂತೆ ನಡೆದಾಡಲು ಪಡುವಂತಾಯಿತು. ಪ್ರಕೃತಿ ಬಡಾವಣೆ, ಕೈಗಾರಿಕಾ ಬಡಾವಣೆ, ಕಾವೇರಿ ಬಡಾವಣೆ, ಪತ್ರಿಕಾ ಭವನ ಮುಂಭಾಗದಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂತು. ಚರಂಡಿ ಉಕ್ಕಿ ಹರಿಯಲಾರಂಭಿಸಿದ್ದ ನೀರಿನಿಂದ ಸಮಸ್ಯೆ ಅನುಭವಿಸಬೇಕಾಯಿತು.

ಪ್ರಕೃತಿ ಬಡಾವಣೆಯಲ್ಲಿ ೮ ಮನೆ ಒಳಗೆ ನೀರು ನುಗ್ಗಿದ್ದು, ಸ್ಥಳೀಯರು ಆತಂಕಕ್ಕೀಡಾದರು. ರಸ್ತೆ ಬದಿ, ಮನೆಯ ವಾಹನ ನಿಲುಗಡೆ ಸ್ಥಳ ದಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿತ್ತು. ಬಾವಿಗಳು ನೀರಿನಲ್ಲಿ ಮುಳುಗಡೆಯಾಯಿತು. ಮಳೆ ನಿಂತ ಮೇಲೆ ಮನೆ ಒಳಗೆ ನುಗ್ಗಿದ್ದ ನೀರು ಹೊರ ಹಾಕಲು ಸ್ಥಳೀಯರು ಶ್ರಮಿಸುತ್ತಿದ್ದರು.

ಕಾವೇರಿ ಹಾಲ್, ನ್ಯಾಷನಲ್ ವೈನ್ಸ್ ಒಳಗೂ ನೀರು ನುಗ್ಗಿತ್ತು. ವಿನಾಯಕ ರೈಸ್ ಮಿಲ್ ಒಳಗೆ ನೀರು ನುಗ್ಗಿದ್ದರಿಂದ ಭತ್ತ- ಅಕ್ಕಿ ಚೀಲಕ್ಕೆ ಹಾನಿವುಂಟಾಯಿತು. ಕಾವೇರಿ ಹಾಲ್ ಗೇಟ್‌ವರೆಗೂ ನೀರು ಶೇಖರಣೆಗೊಂಡಿತ್ತು. ದಾಸವಾಳದಲ್ಲಿ ತೋಡು ತುಂಬಿ, ಒಂದು ಮನೆ ಒಳಗೆ ನೀರು ನುಗ್ಗಿತ್ತು.

ಮಡಿಕೇರಿ ತಹಸೀಲ್ದಾರ್ ಪಿ.ಎಸ್. ಮಹೇಶ್, ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸದಸ್ಯರಾದ ಕಾಳಚಂಡ ಸುಮನ್ ಅಪ್ಪಣ್ಣ, ಎಸ್.ಸಿ. ಸತೀಶ್‌ಪೌರಾಯುಕ್ತ ವಿಜಯ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪ್ರತಿಕೂಲ ಪರಿಸ್ಥಿತಿ ಎದುರಿಸಲು ಗಮನ ಹರಿಸಿದರು. ಜೆಸಿಬಿ ಮೂಲಕ ಕಾವೇರಿ ಹಾಲ್ ಹಿಂಭಾಗದಲ್ಲಿರುವ ತೋಡು ಸರಿ ಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net