

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ಕಳೆದೊಂದು ವಾರದಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರ ಪ್ರದೇಶದ ಕೆಲ ಬಡಾವಣೆ, ಎಕ್ಸಟೆನ್ಸನ್ ಏರಿಯಾದ ರಸ್ತೆಗಳು ಹದಗೆಟ್ಟು ಕೆಂಪು ಬಣ್ಣಕ್ಕೆ ತಿರುಗಿವೆ.
ಭಾನುವಾರವೂ ದಿನವೀಡಿ ಮಳೆ ಸುರಿದು ಜನರು ಹೊರಗೆ ಬರದಂತಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಮಳೆಯಿಂದ ಹಾನಿಯಾಗಿದೆ. ಕೆಲವೆಡೆ ಮನೆಗಳು ಭಾಗಶಃ ಕುಸಿದಿವೆ. ತಂಪು ವಾತಾವರಣ ಮುಂದುವರಿದಿದೆ.
ಗ್ರಾಮೀಣ ಭಾಗದಲ್ಲಿಯೂ ಮಳೆ ಮುಂದುವರಿದಿದ್ದರಿಂದ ರೈತರ ಕೃಷಿ ಕೆಲಸಗಳಿಗೆ ಅಡ್ಡಿಯಾಗಿದೆ. ಬಿತ್ತನೆ ಮಾಡಿದ ನಂತರ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿರುವುದರಿಂದ ಹೊಲದಲ್ಲಿ ಕಳೆ ಹೆಚ್ಚಾಗಿದೆ. ಒಂದಿಷ್ಟು ಬಿಡುವು ನೀಡಿದರೆ ಕಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬಹುದು ಎಂದು ರೈತರು ಹೇಳುತ್ತಿದ್ದಾರೆ.
ಇದೇ ರೀತಿ ಮಳೆ ಮುಂದುವರಿದರೆ ಬೆಳೆಗಿಂತ ಕಳೆಯೇ ದೊಡ್ಡದಾಗಿ ಇಳುವರಿ ಮೇಲೆ ದುಷ್ಪರಿಣಾಮ ಬೀರಲಿದೆ. ಬೆಳೆಗಳು ಕೊಳೆತು ಹೋಗುತ್ತವೆ ಎಂದು ಕೃಷಿಕರು ಆತಂಕಗೊಂಡಿದ್ದಾರೆ.
ತಾಲೂಕಿನ ಎಲ್ಲ ಕಡೆ ಹಳ್ಳ, ತೊರೆಗಳು ಮೈದುಂಬಿಕೊಂಡಿವೆ. ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಅಪಾಯಕಾರಿ ಮಟ್ಟ ತಲುಪಿಲ್ಲ. ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದೇವೆ ಎಂದು ಜಿಲ್ಲಾಡಳಿತ ಹೇಳಿದೆ.
ಜುಲೈ 20ರ ಬೆಳಗ್ಗೆಯಿಂದ 21ರ ಬೆಳಗ್ಗಿನವರೆಗೆ ಹುಬ್ಬಳ್ಳಿಯ ವಿವಿಧ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ಹುಬ್ಬಳ್ಳಿ ಹೋಬಳಿಯಲ್ಲಿ -10 ಮಿಲಿ ಮೀಟರ್, ಛಬ್ಬಿ ಹೋಬಳಿ -17 ಮಿ.ಮೀ., ಶಿರಗುಪ್ಪಿ ಹೋಬಳಿ -8.2 ಮಿ.ಮೀ. ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ -8 ಮಿ.ಮೀ. ಮಳೆಯಾಗಿದೆ.
ಭಾಗಶಃ ಕುಸಿದ ನಾಲ್ಕು ಮನೆ:
ಹುಬ್ಬಳ್ಳಿ ನಗರ ಹಾಗೂ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬೆಂಬಿಡದ ಮಳೆಯಿಂದಾಗಿ ನಿತ್ಯವೂ ಮನೆಗಳಿಗೆ ಹಾನಿ ಸಂಭವಿಸುತ್ತಿದೆ. ಹಳೆಯ ಮಣ್ಣಿನ ಗೋಡೆಗಳು ಕುಸಿಯುತ್ತಿವೆ. ಅನೇಕ ಮನೆಗಳು ತಂಪು ಹಿಡಿದುಕೊಂಡು ಯಾವಾಗ ಬೀಳುತ್ತವೆಯೋ ಎಂಬ ಆತಂಕ ಹುಟ್ಟಿಸಿವೆ.
ಅತಿಯಾದ ಮಳೆಯ ಪರಿಣಾಮ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಭಾನುವಾರ ಮನೆಯೊಂದಕ್ಕೆ ಧಕ್ಕೆಯಾಗಿದೆ. ದೊಡ್ಡೇಶಪ್ಪ ಸಂಗಪ್ಪ ರೇವಣ್ಣವರ ಇವರ ಮನೆ ಭಾಗಶಃ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.
ಇದೇ ರೀತಿ ಅಗಡಿಯಲ್ಲಿ ಕಲ್ಲನಗೌಡ ಗಂಗನಗೌಡ ಹಳೇಮನಿ ಅವರ ಮನೆ, ರೇವಡಿಹಾಳ ಗ್ರಾಮದಲ್ಲಿ ಭೀಮಪ್ಪ ಬಾಲಪ್ಪ ತಳವಾರ ಇವರ ಮನೆಯ ಗೋಡೆ ಕುಸಿದಿದೆ. ನೂಲ್ವಿ ಗ್ರಾಮದ ರೇಣುಕಾ ಗುರುಶಿದಪ್ಪ ವಸ್ತ್ರದ ಇವರ ಮನೆಗೆ ಭಾಗಶಃ ಹಾನಿಯಾಗಿದೆ ಎಂದು ತಹಸೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.