

ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಮರೆಯಾಗಿ ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಮಹಾನಗರದಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆ ಸುರಿದ ಭಾರಿ ಮಳೆ ತಂಪೆರೆದಿದೆ.
ಇಡೀ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ನಗರದ ಕೆಲವೆಡೆ ಅವಾಂತರ ಸೃಷ್ಟಿಸಿದೆ. ವಾಣಿಜ್ಯ ವಹಿವಾಟು ಜಾಸ್ತಿ ನಡೆಯುವ ದಾಜಿಬಾನಪೇಟೆಯಲ್ಲಿನ ನಾಲಾ ತುಂಬಿ ಹರಿದಿದ್ದರಿಂದ ಕೊಳಚೆಯೆಲ್ಲ ರಸ್ತೆಯಲ್ಲಿ ನಿಂತುಕೊಂಡಿತ್ತು.
ತುಳಜಾಭವಾನಿ ದೇವಸ್ಥಾನದ ಮುಂದೆ ಚರಂಡಿ ಕೊಳಚೆಯು ಸಂಗ್ರಹಗೊಂಡಿದ್ದರಿಂದ ದೇಗುಲಕ್ಕೆ ಬರುವ ಭಕ್ತರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಇಲ್ಲಿ ಕಾಡುತ್ತಿದೆ. ನಾಲಾ ಸ್ವಚ್ಛತೆ ಹೆಸರಲ್ಲಿ ಹಲವು ಬಾರಿ ಕಾರ್ಯಾಚರಣೆ ನಡೆದಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಈ ದಿಸೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ರಾತ್ರಿಯೆಲ್ಲ ಮಳೆಯಾಗಿದ್ದರಿಂದ ನಗರದ ಹಲವು ಕಡೆಗಳಲ್ಲಿ ಗಟಾರುಗಳು ತುಂಬಿ ಹರಿದವು. ಈ ವರ್ಷದ ಅತೀ ಹೆಚ್ಚು ಮಳೆಯೂ ಹುಬ್ಬಳ್ಳಿಯಲ್ಲಿ ಬುಧವಾರ ದಾಖಲಾಗಿದೆ.
ಮಂಗಳವಾರ ರಾತ್ರಿಯಿಂದ ಬೆಳಗಿನವರೆಗೆ ಹುಬ್ಬಳ್ಳಿಯಲ್ಲಿ 40.2 ಮಿ.ಮೀ., ಛಬ್ಬಿ 35.0 ಮಿ.ಮೀ., ಶಿರಗುಪ್ಪಿ- 26.4 ಮಿ.ಮೀ. ಹಾಗೂ ಬ್ಯಾಹಟ್ಟಿಯಲ್ಲಿ- 14.0 ಮಿ.ಮೀ. ಮಳೆ ದಾಖಲಾಗಿದೆ.
ಹುಬ್ಬಳ್ಳಿ ನಗರದ ಮಟ್ಟಿಗೆ ಇದು ಈ ವರ್ಷದ ದಾಖಲೆ ಮಳೆ ಎಂದು ತಹಸೀಲ್ದಾರ್ ಕಲಗೌಡ ಪಾಟೀಲ ತಿಳಿಸಿದ್ದಾರೆ.